
ಮಡಿಕೇರಿ NEWS DESK ಮಾ.1 : ದಲಿತರ ಸ್ವಾಭಿಮಾನಿ ಸಮಾವೇಶದ ಹೆಸರಿನಲ್ಲಿ ಫೆ.22ರಂದು ಮಡಿಕೇರಿ ನಗರದಲ್ಲಿ ಕಾರ್ಯಕ್ರಮ ಆಯೋಜಿಸಿದ ಸಂಘಟನೆ ಸಾರ್ವಜನಿಕವಾಗಿ ಲೆಕ್ಕಪತ್ರಗಳನ್ನು ಮಂಡಿಸಬೇಕೆಂದು ವಿ.ನಾಗರಾಜ್ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ಹೆಚ್.ಎಸ್.ಕೃಷ್ಣಪ್ಪ, ಜಿಲ್ಲಾ ಸಂಘಟನಾ ಸಂಯೋಜಕರಾದ ರಜನಿಕಾಂತ್ ವಿ.ಆರ್, ಹೆಚ್.ಎನ್.ಯೋಗೇಶ್ ಕುಮಾರ್ ಹಾಗೂ ಜಿಲ್ಲಾ ಮಹಿಳಾ ಸಂಯೋಜಕಿ ಓಮನ ಜೆ.ಎಂ ಸ್ವಾಭಿಮಾನಿ ಸಮಾವೇಶದ ಹೆಸರಿನಲ್ಲಿ ಆಯೋಜಕರು ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಕೊಡಗು ಜಿಲ್ಲೆಯ ಇಬ್ಬರು ಶಾಸಕರಿಗೆ ಪ್ರಶಸ್ತಿ ನೀಡುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಸಮಾವೇಶದಲ್ಲಿ 5 ಸಾವಿರ ಮಂದಿ ಸೇರಲಿದ್ದಾರೆ. ಸುಮಾರು ನೂರು ಬೈಕ್ ಗಳೊಂದಿಗೆ ಪೂರ್ವಿಕರ ಭಾವಚಿತ್ರವಿರುವ ಬೃಹತ್ ಮೆರವಣಿಗೆ ಸಾಗಲಿದೆ ಎಂದು ಪ್ರಚಾರ ಪಡೆದು ಹಣ ಸಂಗ್ರಹಿಸಿದ್ದಾರೆ. ಅಲ್ಲದೆ 37 ದಲಿತ ಸಂಘಟನೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ ಸಮಾವೇಶ ಕೇವಲ 250 ಮಂದಿಗೆ ಮಾತ್ರ ಸೀಮಿತವಾಗಿತ್ತು, ಡಾ.ಅಂಬೇಡ್ಕರ್ ಹಾಗೂ ಬುದ್ಧ ಅವರ ಭಾವಚಿತ್ರವಿದ್ದ ರಥ ಹೊರತು ಪಡಿಸಿದರೆ ಬೇರೇನೂ ಇರಲಿಲ್ಲ. ಮೆರವಣಿಗೆ ಮತ್ತು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ನಿಯಮ ಬಾಹಿರವಾಗಿ ಬಳಸಿಕೊಳ್ಳಲಾಗಿದೆ. ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಸಾಗಿದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಿರಲಿಲ್ಲ ಎಂದು ಆರೋಪಿಸಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸ್ವಾಭಿಮಾನಿ ಸಮಾವೇಶ ನಡೆಸಿದ ಸಂಘಟನೆ ಕಳೆದ 30 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿರುವುದಾಗಿ ಹೇಳಿಕೊಂಡಿದೆ. ಪ್ರತಿಭಾ ಪುರಸ್ಕಾರಕ್ಕಾಗಿ ಸಾರ್ವಜನಿಕವಾಗಿ ಹಣ ಸಂಗ್ರಹಿಸುತ್ತಿರುವ ಆರೋಪವೂ ಇದೆ. ಆದ್ದರಿಂದ ಈ ಸಂಘಟನೆ ನಡೆಸಿರುವ ಎಲ್ಲಾ ಕಾರ್ಯಕ್ರಮಗಳ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸಬೇಕು ಎಂದು ಹೆಚ್.ಎಸ್.ಕೃಷ್ಣಪ್ಪ, ರಜನಿಕಾಂತ್ ವಿ.ಆರ್, ಹೆಚ್.ಎನ್.ಯೋಗೇಶ್ ಕುಮಾರ್ ಹಾಗೂ ಓಮನ ಜೆ.ಎಂ ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಯಮ ಬಾಹಿರ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.








