
ಮಡಿಕೇರಿ NEWS DESK ಮಾ.2 : ನಾಪೋಕ್ಲುವಿನಲ್ಲಿ ನಡೆದ ಅಪ್ಪಚ್ಚಿರ ಗೌತಮ್ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಡಿಕೇರಿ ಕೊಡವ ಸಮಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರಿಗೆ ದೂರು ನೀಡಿದ್ದಾರೆ. ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಿದ ಕೊಡವ ಸಮಾಜದ ನಿಯೋಗ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ದುಷ್ಕರ್ಮಿಗಳಿಂದ ಅಮಾಯಕ ಯುವಕ ಗೌತಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಸಮಾಜದ ಶಾಂತಿ ಕದಡುವ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ಯಾವುದೇ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಗೌತಮ್ ಮೇಲೆ ಹಲ್ಲೆ ಮಾಡಿದವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಕಠಿಣ ಕಾನೂನು ಕ್ರಮ ಕೈಗೊಂಡು ಶಿಕ್ಷಗೆ ಗುರಿ ಪಡಿಸಬೇಕು. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಮುಖರು ಒತ್ತಾಯಿಸಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಕನ್ನಂಡ ಕವಿತ ಬೊಳ್ಳಪ್ಪ, ನಂದಿನೆರವಂಡ ರವಿ ಬಸಪ್ಪ, ಮೂವೆರ ಜಯರಾಂ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಂಡೆರ ಲಲ್ಲು ಕುಟ್ಟಪ್ಪ, ಮಂಡಿರ ಸದಾ ಮುದ್ದಪ್ಪ, ಪಾಲೆಯಂಡ ರೂಪ ಮತ್ತಿತರರು ದೂರು ನೀಡುವ ಸಂದರ್ಭ ಹಾಜರಿದ್ದರು.








