ಮಡಿಕೇರಿ NEWS DESK ಮಾ.6 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17 ನೇ ಬಜೆಟ್ ನಲ್ಲಿ ಕೊಡಗಿನ ಜನರ ನಿರೀಕ್ಷೆಗಳು ಹುಸಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ. ಜಿಲ್ಲೆಯ ಜನ ಪ್ರಮುಖವಾಗಿ ಪ್ರವಾಸೋದ್ಯಮದ ಅಭಿವೃದ್ಧಿ, ಸರ್ವಋತು ರಸ್ತೆಗಳ ನಿರ್ಮಾಣ ಮತ್ತು ವನ್ಯಜೀವಿಗಳ ಉಪಟಳ ನಿಯಂತ್ರಣಕ್ಕೆ ಶಾಶ್ವತ ಹಾಗೂ ವಿಶೇಷ ಯೋಜನೆ ಘೋಷಿಸುವ ನಿರೀಕ್ಷೆಯಲ್ಲಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಇದ್ಯಾವುದಕ್ಕೂ ಆದ್ಯತೆ ನೀಡಿಲ್ಲ. ಜಿಲ್ಲೆಯ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಅತಿವೃಷ್ಟಿಯಿಂದ ಫಸಲು ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರವನ್ನು ಕೂಡ ನೀಡಿಲ್ಲ. ಮುಂದೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲಕುವ ಕೃಷಿಕ ವರ್ಗಕ್ಕೆ ನೆರವಿನ ಪ್ಯಾಕೇಜ್ ನ್ನು ಬಜೆಟ್ ನಲ್ಲಿ ಮೀಸಲಿಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಜೆಟ್ ನ ಗಾತ್ರ ರೂ.4.48ಲಕ್ಷ ಕೋಟಿ ಆಗಿದೆ, ಸಾಲದ ಗಾತ್ರ ಹೆಚ್ಚಾಗಿದೆ. ಈ ಹೊರೆ ಜನರ ಮೇಲೆ ಬೀಳಲಿದೆ, ತೆರಿಗೆ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ ಮೂಲಭೂತ ಸೌಕರ್ಯಕ್ಕೆ ರೂ.8,600 ಕೋಟಿ ಮೀಸಲಿಡಲಾಗಿತ್ತು. ಈ ಬಾರಿ 4,000 ಕೋಟಿಗೆ ಇಳಿಕೆ ಮಾಡಲಾಗಿದೆ. 56 ಸಾವಿರ ಸರಕಾರಿ ಉದ್ಯೋಗ ಭರ್ತಿ ಮಾಡುವ ಉದ್ದೇಶ ಉತ್ತಮ ಕ್ರಮ. ತಂತ್ರಜ್ಞಾನ, ಕೃಷಿ ವಲಯಕ್ಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ, ಕಾರ್ಮಿಕ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಆರೋಗ್ಯ, ಶಿಕ್ಷಣ, ಸಹಕಾರ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕಿತ್ತು ಎಂದು ಭೋಜಣ್ಣ ಸೋಮಯ್ಯ ಅಭಿಪ್ರಾಯಪಟ್ಟಿದ್ದಾರೆ.







