ಮಡಿಕೇರಿ NEWS DESK ಮಾ.6 : ರಾಜ್ಯದ ಕಾಂಗ್ರೆಸ್ ಸರಕಾರ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎನ್ನುವುದಕ್ಕೆ ಈ ಬಾರಿಯ ಬಜೆಟ್ ಸಾಕ್ಷಿಯಾಗಿದೆ. ಕಾವೇರಿ ನೀರಿನ ಮೂಲಕ ರಾಜ್ಯ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿದ್ದರೂ ಜೀವನದಿಯ ತವರು ಜಿಲ್ಲೆಗೆ ವಿಶೇಷವಾದ ಯೋಜನೆ ಅಥವಾ ಅನುದಾನವನ್ನು ಘೋಷಿಸದೆ ಇರುವುದು ವಿಷಾದಕರ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಟೀಕಿಸಿದ್ದಾರೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸರಕಾರದ ಮೇಲೆ ಒತ್ತಡ ಹೇರಿ ವಿಶೇಷ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಬಗ್ಗೆ ಯಾವುದೇ ಆಸಕ್ತಿ ಹೊಂದದೆ ಇರುವುದು ಸ್ಪಷ್ಟವಾಗುತ್ತಿದೆ. ಪ್ರತಿವರ್ಷ ಅತಿವೃಷ್ಟಿಯಿಂದ ಜಿಲ್ಲೆಯ ಜನ ಹಾಗೂ ರೈತಾಪಿ ವರ್ಗ ಸಂಕಷ್ಟವನ್ನು ಎದುರಿಸುತ್ತಾರೆ. ವನ್ಯಜೀವಿಗಳ ದಾಳಿಯಿಂದ ನಲುಗಿ ಹೋಗಿದ್ದಾರೆ. ರಸ್ತೆಗಳ ಅವ್ಯವಸ್ಥೆಯಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಯೋಜನೆಗಳನ್ನು ಘೋಷಿಸದೆ ನಿರ್ಲಕ್ಷಿಸಲಾಗಿದೆ. ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಲು ಅಗತ್ಯ ನೆರವನ್ನು ಕೂಡ ನೀಡಿಲ್ಲ್ಲ. ಜಿಲ್ಲೆಗೆ ಯಾವುದೇ ವಿಶೇಷ ಪ್ಯಾಕೇಜ್ ನ್ನು ಘೋಷಿಸದೆ ಇರುವುದನ್ನು ಗಮನಿಸಿದರೆ ರಾಜ್ಯ ಸರಕಾರದ ಬೊಕ್ಕಸ ಬರಿದಾಗಿದೆ ಎನ್ನುವುದು ಖಾತ್ರಿಯಾಗುತ್ತಿದೆ. ರಾಜ್ಯದ ಗ್ರಾಮೀಣ ಅಭಿವೃದ್ಧಿಗೆ ಅತ್ಯಂತ ಕಡಿಮೆ ಅನುದಾನವನ್ನು ಮೀಸಲಿರಿಸಲಾಗಿದೆ. ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಒಂದು ವರ್ಗವನ್ನು ಮಾತ್ರ ಓಲೈಕೆ ಮಾಡುವ ಉದ್ದೇಶ ಬಜೆಟ್ ನಲ್ಲಿ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ. ಇದೊಂದು ತಾರತಮ್ಯದ ಬಜೆಟ್ ಆಗಿದ್ದು, ಕೊಡಗಿನ ಕಡೆಗಣನೆಯನ್ನು ಜನರು ಸಹಿಸುವುದಿಲ್ಲವೆಂದು ತೇಲಪಂಡ ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.







