
ಮೈಸೂರು NEWS DESK ಜು.19 : ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರಿಗೆ “ಯೋಗ ಕೌಸ್ತುಭ” ಪ್ರಶಸ್ತಿ ಲಭ್ಯವಾಗಿದೆ. ಸುಮಾರು 41 ಅಧ್ಯಯನ ಕೃತಿಗಳ ರಚಿಸಿರುವ ರಮೇಶ್ ಉತ್ತಪ್ಪ ಅವರು ಮೈಸೂರು ಯೋಗದ ಕುರಿತು “ಯೋಗ ಸಂಗೀತ-ಮೈಸೂರು ಪರಂಪರೆ” ಎಂಬ ಕೃತಿ ಬರೆದಿದ್ದಾರೆ. ಇದರಲ್ಲಿ ಯೋಗಕ್ಕೆ ಮೈಸೂರಿನ ಕೊಡುಗೆ, ಹಿನ್ನೆಲೆ, ಯೋಗಾಚಾರ್ಯರು, ಮೈಸೂರು ಸಂಗೀತ ಪರಂಪರೆಯ ಸಂಶೋಧನಾತ್ಮಕ ವಿವರಗಳಿವೆ. ಮೈಸೂರು ಯೋಗ ಸ್ಫೋರ್ಟ್ಸ್ ಫೌಂಡೇಶನ್ ಹಾಗೂ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಶ್ರೀವತ್ಸ, “ರಮೇಶ್ ಉತ್ತಪ್ಪ ಅವರು ಮೈಸೂರಿನ ಗಲ್ಲಿ ಹಾಗೂ ವೃತ್ತಗಳ ಕುರಿತು ಬರೆದ ಅಧ್ಯಯನ ಕೃತಿ ಅತ್ಯಂತ ಮಹತ್ವದ್ದು. ಅದೇ ರೀತಿ ಯೋಗ ಪರಂಪರೆ ಹಾಗೂ ದಸರಾ ಆನೆಗಳ ಕೃತಿ ಕೂಡ ಜನರ ಮೆಚ್ಚುಗೆ ಪಾತ್ರವಾಗಿವೆ. ಈ ಕೃತಿಗಳನ್ನು ದಸರಾ ಉನ್ನತ ಸಮಿತಿ ಸಭೆಯಲ್ಲಿ ತಾವು ಮುಖ್ಯಮಂತ್ರಿಗಳಿಗೆ ನೀಡಿರುವುದಾಗಿ, ಮುಖ್ಯಮಂತ್ರಿಗಳು ದಸರಾ ಹಬ್ಬಕ್ಕೆ ಮುನ್ನ ಅವುಗಳನ್ನು ಓದುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಯೋಗಾಚಾರ್ಯ ಡಾ. ಪಿ.ಎನ್.ಗಣೇಶ್ ಕುಮಾರ್, ಸರಕಾರಿ ಆಯುರ್ವೇದ ಮಹಾವಿದ್ಯಾಲಯದ ಡಾ. ಎಚ್. ಶಶಿರೇಖಾ, ಸುಚರಿತ ಮಾತಾಜಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಂತಾದವರು ಉಪಸ್ಥಿತರಿದ್ದರು.









