ವಿರಾಜಪೇಟೆ, NEWS DESK ಮಾ.07: ಸ್ವಚ್ಛತೆಯ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಬಿಟ್ಟಂಗಾಲ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಫೀಕ್ ಎ ಎ ರವರು ಅಭಿಪ್ರಾಯಪಟ್ಟರು. ಅವರು ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ತೋಡು ನಾಂಗಲದಲ್ಲಿ ನಡೆಯುತ್ತಿದ್ದು ಅದರ ಪ್ರಯುಕ್ತ ಜರುಗಿದ ಗ್ರಾಮ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಸ್ವಯಂ ಸೇವಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ಸಂರಕ್ಷಣೆ ಎಂಬುವುದು ಪ್ರತೀ ಮನೆ ಮನೆಗಳಿಂದಲೂ ಆರಂಭವಾಗಬೇಕು. ಸ್ವಚ್ಛ ಪರಿಸರ ನಿರ್ಮಾಣದಿಂದ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯಕ್ರಮಗಳು ಗಮನಾರ್ಹವಾಗಿದ್ದು ರಾಷ್ಟ್ರದ ಪ್ರಗತಿಗೆ ಬುನಾದಿಯಾಗಿದೆ ಎಂದು ಹೇಳಿದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ರವರು ಮಾತನಾಡಿ ನಮ್ಮ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ವರ್ಷಂಪ್ರತಿ ವಿದ್ಯಾರ್ಥಿಗಳು ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಜಾಗೃತಿಯನ್ನು ಮಾಡಿಸಲಾಗುತ್ತಿದೆ ಎಂದು ಹೇಳಿದರು. ಮಾತ್ರವಲ್ಲದೆ ಪರಿಸರ ಪ್ರಜ್ಞೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಕಲ್ತೊಡು ನಾಂಗಲ ಶಾಲೆಯಿಂದ ಆರಂಭಗೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಬಿಟ್ಟಂಗಾಲದ ಆರ್. ಕೆ. ಎಫ್ ವರೆಗೂ ನಡೆಯಿತು. ವಿದ್ಯಾರ್ಥಿಗಳು ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಎಸೆದಿದ್ದ ಪ್ಲಾಸ್ಟಿಕ್, ಬಾಟಲ್, ಪೇಪರ್ ಗಳನ್ನು ತೆಗೆದು ಪಂಚಾಯತ್ ಕಸದ ವಾಹನಕ್ಕೆ ಹಾಕುವುದರ ಮೂಲಕ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಶಿಬಿರಾಧಿಕಾರಿ ಬಿ. ಎನ್. ಶಾಂತಿಭೂಷಣ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಚಂಗೆಟ್ಟಿರ ಸೋಮಯ್ಯ, ಮಾಚಯ್ಯ, ಬಿಪಿನ್,ಉಪನ್ಯಾಸಕರುಗಳಾದ ಜೇಮ್ಸ್ ಅಂತೋಣಿ, ನಮೃತ, ಶಶಿಕಲಾ ಹಾಗೂ ಎನ್ ಎಸ್ ಎಸ್ ಘಟಕದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.







