
ಮಡಿಕೇರಿ NEWS DESK ಮಾ.11 : ಪ್ರತಿಷ್ಠಿತ ವಿಜಯರತ್ನ ಇಂಟರ್‌ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಎಡಿಕೇರಿ ಪ್ರಸನ್ನ ಕುಶಾಲಪ್ಪ ಅವರನ್ನು ಬಲ್ಲಮಾವಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಡಿಕೇರಿ ಕುಟುಂಬದಸ್ಥರ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕೊಡಗಿನಲ್ಲಿ ಅವರು ಮಾಡುತ್ತಿರುವ ಉತ್ತಮ ಸಮಾಜ ಸೇವೆ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಇದೇ ಸಂದರ್ಭ ಕೊಂಡಾಡಲಾಯಿತು. ವಿಜಯರತ್ನ ಇಂಟರ್‌ನ್ಯಾಷನಲ್ ಪ್ರಶಸ್ತಿ ದುಬೈನಲ್ಲಿ ಸ್ವೀಕರಿಸಿ ಹಿಂದಿರುಗಿದ ಬೆನ್ನಲ್ಲೇ ಸಂಭ್ರಮದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಟುಂಬದ ಹಿರಿಯರಾದ ಎಡಿಕೇರಿ ಸೀತಾರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಪ್ರಮುಖರಾದ ಎಡಿಕೇರಿ ದೇವಯ್ಯ, ಎಡಿಕೇರಿ ಉತ್ತಪ್ಪ, ಎಡಿಕೇರಿ ಚಂದ್ರಶೇಖರ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು, ಗುರು, ಹಿರಿಯರು ಮತ್ತು ಬಂಧುಬಳಗ ಈ ಸಂದರ್ಭ ಉಪಸ್ಥಿತರಿದ್ದರು. ಪ್ರಸನ್ನ ಅವರನ್ನು ಅಭಿನಂದಿಸಿ ಮಾತನಾಡಿ ಅವರ ಸೇವೆ ಮತ್ತು ಸಾಧನೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದು ಹಾರೈಸಿದರು. ಕುಟುಂಬದ ಏಕತೆ, ಸಂಸ್ಕೃತಿ ಮತ್ತು ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ನಡೆದ ಈ ಕಾರ್ಯಕ್ರಮದಲ್ಲಿ 60 ವರ್ಷ ಮೇಲ್ಪಟ್ಟ ಕುಟುಂಬದ ಹಿರಿಯರನ್ನು ಕುಟುಂಬದ ವತಿಯಿಂದ ಗೌರವಿಸಿ, ಅವರ ಅನುಭವ ಮತ್ತು ಆಶೀರ್ವಾದ ಪಡೆದುಕೊಳ್ಳಲಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಿದ ಯುವಕರನ್ನು ಹಾಗೂ 2024-25ನೇ ಸಾಲಿನ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅವರ ಸಾಧನೆಗಳನ್ನು ಪ್ರೋತ್ಸಾಹಿಸಲಾಯಿತು.









