
ಕೂಡಿಗೆ ಮಾ.18 NEWS DESK : ಕುಶಾಲನಗರ ತಾಲ್ಲೂಕಿನ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಆರಂಭಗೊಂಡ
ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಸುಗಮವಾಗಿ ನಡೆಯಿತು. ಪರೀಕ್ಷೆಯ ಪ್ರಥಮ ದಿನವಾದ ಬುಧವಾರ ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಯನ್ನು ಬರೆದು ಪರೀಕ್ಷಾ ಕೇಂದ್ರದಿಂದ ಸಂತಸದಿಂದ ಹೊರ ಬರುತ್ತಿದ್ದ ದೃಶ್ಯ ಕಂಡುಬಂತು. ಪರೀಕ್ಷೆಯು ಏ.2ರ ವರೆಗೆ ನಡೆಯಲಿದೆ. ಮೊದಲ ಕನ್ನಡ ಪರೀಕ್ಷೆಯಲ್ಲಿ ನೋಂದಾಯಿತ 259 ವಿದ್ಯಾರ್ಥಿಗಳ ಪೈಕಿ 254 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 5 ಮಂದಿ ಪುನಾವರ್ತಿತ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕೂಡುಮಂಗಳೂರು ಸರ್ಕಾರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದರು. :: ಪೋಷಕರಲ್ಲಿ ಸಂತಸ :: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಎರಡು ವರ್ಷಗಳ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನು ಪುನರ್ ಆರಂಭಿಸಿದ್ದು, ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಂತಸ ತಂದಿದೆ. ಕೂಡಿಗೆ ಭಾಗದಲ್ಲಿ 8 ಪ್ರೌಢಶಾಲೆಗಳಿದ್ದು, ಪ್ರಸಕ್ತ ಸಾಲಿನ ಮಕ್ಕಳು ಹಾಗೂ ಪುನರಾವರ್ತಿತ ಮಕ್ಕಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಸೇರಿ 265 ಮಕ್ಕಳು ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದೆ. ಕೂಡಿಗೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರ ಆರಂಭಿಸಿರುವುದರಿಂದ ಕೂಡಿಗೆ ಮತ್ತು ಸುತ್ತಮುತ್ತಲಿನ ಮಕ್ಕಳು ದೂರದ ಕುಶಾಲನಗರ ಪರೀಕ್ಷಾ ಕೇಂದ್ರಕ್ಕೆ ತೆರಳುವುದು ತಪ್ಪಿದೆ ಎಂದು ಪೋಷಕರು ತಿಳಿಸಿದರು.









