
ಕುಶಾಲನಗರ, ಮಾ.19 NEWS DESK : ತೊರೆನೂರಿನಲ್ಲಿ ಯುಗಾದಿಯ ಅಂಗವಾಗಿ ಕೃಷಿಕರಿಂದ ಹೊನ್ನಾರು ಉತ್ಸವ ಸಂಭ್ರಮದಿಂದ ನಡೆಯಿತು. ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಆಕಳುಗಳೊಂದಿಗೆ ಆಗಮಿಸಿದ ಅನ್ನದಾತರು ಗ್ರಾಮದ ದೈವ ಬಸವೇಶ್ವರ ಸನ್ನಿಧಿಯಲ್ಲಿ ಸಾಮೂಹಿಕವಾಗಿ ಪೂಜೆ ನೆರವೇರಿಸಿದರು. ಬಳಿಕ ಗ್ರಾಮದ ದೇವರ ಭೂಮಿಗೆ ತೆರಳಿ ಎತ್ತು ಹಾಗೂ ನೇಗಿಲು ಗಳಿಗೆ ಪೂಜೆ ಸಲ್ಲಿಸಿದ ನಂತರ ವರ್ಷದ ಮೊದಲ ಉಳುಮೆಯನ್ನು ಆರಂಭಿಸಿದರು. ಬಳಿಕ ಗ್ರಾಮದ ಮುಖ್ಯ ಬೀದಿಗಳಲ್ಲಿ ಹೊನ್ನಾರಿನೊಂದಿಗೆ ಮೆರವಣಿಗೆಯಲ್ಲಿ ಧಾವಿಸಿ ಗ್ರಾಮದ ಹೊರಬದಿಯ ಮುಖ್ಯ ರಸ್ತೆಯ ಬಸವೇಶ್ವರ ದೇವಾಲಯದಿಂದ ತಮ್ಮ ಮನೆಗಳಿಗೆ ಮರಳಿದರು. ಅಲಂಕೃತ ಉಳುಮೆಯ ಎತ್ತುಗಳ ಹೊನ್ನಾರು ಉತ್ಸವ ಕಣ್ತುಂಬಿಕೊಳ್ಳಲು ಗ್ರಾಮದ ಮಹಿಳೆಯರು ಮಕ್ಕಳಾದಿಯಾಗಿ ಇಡೀ ಗ್ರಾಮಸ್ಥರು ಒಂದೆಡೆ ಸೇರಿ ಸಂಭ್ರಮಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್, ಕಾರ್ಯದರ್ಶಿ ಟಿ.ಎಲ್.ಮಹೇಶ್, ಕಾರ್ಯಾಧ್ಯಕ್ಷ ಟಿ.ಜಿ.ಶಿವಣ್ಣ, ಗೌರವ ಅಧ್ಯಕ್ಷ ಟಿ.ಡಿ.ಈಶ್ವರ್, ಪ್ರಮುಖರಾದ ಟಿ.ಜಿ.ಪ್ರೇಮಕುಮಾರ್, ಚಿದಾನಂದ, ಗ್ರಾಪಂ ಮಾಜಿ ಸದಸ್ಯ ಟಿ.ಸಿ.ಶಿವಕುಮಾರ್, ಶಿಕ್ಷಕ ರಮೇಶ್, ಸಣ್ಣಪ್ಪ, ಸೋಮಣ್ಣ, ತ್ರಿಣೇಶ್, ಸುನಿಲ್, ಮೊದಲಾದವರಿದ್ದರು.
ವರದಿ : ಕೆ.ಎಸ್.ಮೂರ್ತಿ









