
ಮಡಿಕೇರಿ NEWS DESK ಮಾ.20 : ಪ್ರವೇಶ ಪತ್ರ ಇಲ್ಲ ಎನ್ನುವ ಕಾರಣದಿಂದ ಬೆಟ್ಟಗೇರಿಯ ಇಬ್ಬರು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶವನ್ನು ನಿರಾಕರಿಸಿರುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿರುವ ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರು, ಮಾ.23ರಂದು ನಡೆಯುವ ಎರಡನೇ ಪರೀಕ್ಷೆ ಬರೆಯಲು ಈ ಮಕ್ಕಳಿಗೆ ಅವಕಾಶ ನೀಡಬೇಕು, ಇಲ್ಲವಾದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬೆಟ್ಟಗೇರಿ ಗ್ರಾಮಸ್ಥರಾದ ಹೊಸೂರು ಗಿರೀಶ್ ಮಾತನಾಡಿ, ಬೆಟ್ಟಗೇರಿ ಪ್ರೌಢಶಾಲೆಯಲ್ಲಿ 15 ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರವೇಶ ಪತ್ರ ಬಂದಿದ್ದರು, ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪತ್ರ ಬಂದಿಲ್ಲ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಪರೀಕ್ಷೆಗೆ ಅವಕಾಶ ನೀಡಬೇಕಿದ್ದ ಅಧಿಕಾರಿಗಳು,ಅನುಮತಿ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೆಟ್ಟಗೇರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ದೊರಕದಿರುವುದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಮುಂದಿನ ಸೋಮವಾರ ನಡೆಯುವ ಪರೀಕ್ಷೆಗೆ ಮೊದಲ ಪರೀಕ್ಷೆ ವಂಚಿತ ಇಬ್ಬರು ಮಕ್ಕಳಿಗೆ ಅವಕಾಶ ನೀಡಬೇಕೆಂದು ಪುನರುಚ್ಚರಿಸಿದರು. ಪರೀಕ್ಷೆಗೆ ಅವಕಾಶ ನಿರಾಕರಣೆಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹತ್ತಾರು ಸಬೂಬುಗಳನ್ನು ನೀಡುತ್ತಾರೆ. ಆದರೆ, ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಅವರಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡುವುದು ಅವರ ಕರ್ತವ್ಯವಾಗುತ್ತದೆಂದು ಸ್ಪಷಪಡಿಸಿದರು. ಪರೀಕ್ಷೆ ವಂಚಿತ ವಿದ್ಯಾರ್ಥಿ ಪ್ರಥಮ್‌ನ ತಾಯಿ ಕಡ್ಯದ ಶೋಭಾವತಿ ಮಾತನಾಡಿ, ಮಗನಿಗೆ ಮುಂದಿನ ಏಪ್ರಿಲ್‌ನಲ್ಲಿ ನಡೆೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ತಮ್ಮ ಮಗನಿಗೆ ಈಗ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿಯ ಮುಂದಿನ ಎಲ್ಲಾ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಮಕ್ಕಳ ಪೋಷಕರಾದ ಕಡ್ಯದ ನರೇಂದ್ರ, ಗ್ರಾಮಸ್ಥರಾದ ಕಡ್ಯದ ಸೋಮಣ್ಣ, ಬೆಳ್ಯನ ಪವಿತ್ರ ಕುಮಾರ್, ಕಡ್ಯದ ಆರ್. ಭವಾನಿ ಶಂಕರ್ ಉಪಸ್ಥಿತರಿದ್ದರು.








