
ಸೋಮವಾರಪೇಟೆ ಮಾ.26 NEWS DESK : ಚಿಕ್ಕಂದಿನಿಂದಲೇ ಹೆಣ್ಣುಮಕ್ಕಳಿಗೆ ದೊಡ್ಡ ಕನಸು ಕಾಣಬಾರದು ಎಂದು ಹೇಳುವ ಸಮಾಜದ ಮನೋಭಾವವನ್ನು ಬದಲಾಯಿಸುವ ಅಗತ್ಯವಿದೆ ಎಂದು ಚಲನಚಿತ್ರ ಹಾಗೂ ಕಿರುತೆರೆ ಕಲಾವಿದೆ ವರ್ಷ ಗಿರಿಧರ್ ಹೇಳಿದರು. ಸೋಮವಾರಪೇಟೆ ಬ್ರಾಹ್ಮಣ ಸಮಾಜ ಹಾಗೂ ದೇವಿ ಬಳಗದ ಆಶ್ರಯದಲ್ಲಿ ಶ್ರೀ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗುರಿಯೊಂದಿಗೆ ಯಾವುದೇ ಕ್ಷೇತ್ರದಲ್ಲಾದರೂ ಮುಂದುವರಿಯುವ ಮನೋಭಾವ ಬೆಳೆಸಿಕೊಂಡು, ಹೆಣ್ಣುಮಕ್ಕಳು ದೊಡ್ಡ ಕನಸುಗಳನ್ನು ಕಂಡು ಸಾರ್ಥಕ ಜೀವನ ಸಾಧಿಸಬೇಕು ಎಂದು ಹೇಳಿದರು. ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆ ಮಾತ್ರವಲ್ಲ, ಬದಲಾಗಿ ಮಹಿಳೆಯರ ತ್ಯಾಗ, ಶಕ್ತಿ, ಸಾಹಸ ಮತ್ತು ಸಾಧನೆಗಳನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಎಂದರು. ಹೆಣ್ಣು ಸಂಸಾರದ ಕಣ್ಣು ಎಂಬ ನುಡಿಗಟ್ಟಿನಂತೆ, ಮನೆ, ಕುಟುಂಬ ಮತ್ತು ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರು ತಮ್ಮ ಸಾಮರ್ಥ್ಯ ವನ್ನು ಅರಿತು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಬ್ರಾಹ್ಮಣ ಸಮಾಜದ ಹಿರಿಯರಾದ ರತನ್ ಪದ್ಮನಾಭ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾ ಸತೀಶ್ ವಹಿಸಿದ್ದರು. ಕಾರ್ಯಕ್ರಮವನ್ನು ವಿದ್ಯಾ ಸೋಮೇಶ್ ನಿರೂಪಿಸಿದರು. ಸಿಂಚನ ಪ್ರಸಾದ್ ಮತ್ತು ನಂದನ ಮಧುಸೂದನ್ ಪ್ರಾರ್ಥಿಸಿದರು. ಕಾರ್ಯದರ್ಶಿ ಸುಮಾ ಆನಂದ್ ವಂದಿಸಿದರು. ಈ ಸಂದರ್ಭದಲ್ಲಿ ಸಮಾಜದ ಸದಸ್ಯರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಕುಮುದಿನಿ ಜಗದೀಶ್, ಗಾಯತ್ರಿ ನಾಗರಾಜ್, ಅರ್ಚನಾ ಶ್ರೀಕಾಂತ್, ವಸಂತ ರಮೇಶ್, ರಮಾ ನಾಗೇಂದ್ರನಾಥ್, ವಿಮಲ ರಾಜ್ ಗೋಪಾಲ್, ಪ್ರೇಮಾ ದಿನೇಶ್, ಲಕ್ಷ್ಮಿ ಶ್ರೀನಿವಾಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.









