
ಮಡಿಕೇರಿ ಮಾ.28 NEWS DESK : ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಕೃತ್ಯಗಳನ್ನು ಖಂಡಿಸಿ ಏ.1 ರಂದು ನಾಪೋಕ್ಲುವಿನಲ್ಲಿ ಬೃಹತ್ ಹಿಂದೂ ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ಹಿಂದೂ ಸುರಕ್ಷಾ ಸಮಿತಿಯ ನಾಪೋಕ್ಲು ಸಂಚಾಲಕ ಲವ ನಾಣಯ್ಯ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 10 ಗಂಟೆಗೆ ನಾಪೋಕ್ಲು ಹಳೇ ತಾಲ್ಲೂಕು ಜಂಕ್ಷನ್ ನಿಂದ ಜಾಥಾ ನಡೆಯಲಿದೆ. ನಂತರ ಮಾರುಕಟ್ಟೆ ಆವರಣದಲ್ಲಿ ಜನಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದರು. ಇಪ್ಪತ್ತನಾಲ್ಕು ಗ್ರಾಮಗಳ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರವಾದ ನಾಪೋಕ್ಲುವಿನಲ್ಲಿ ಪ್ರಸ್ತುತ ಹಿಂದೂ ಸಮಾಜಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ನಿಗ್ರಹಿಸಬೇಕಾದ ನಾಪೋಕ್ಲು ಪೊಲೀಸ್ ಇಲಾಖೆ ನಿಷ್ಕ್ರೀಯವಾಗಿದೆಯೆಂದು ಆರೋಪಿಸಿದ ಲವ ನಾಣಯ್ಯ, ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರುಗಳನ್ನು ನೀಡಿದ್ದರು ಸೂಕ್ತ ಸ್ಪಂದನ ದೊರಕಿಲ್ಲ. ಹೀಗಿದ್ದ ಮೇಲೆ ಹಿಂದೂ ಸಮಾಜಕ್ಕೆ ರಕ್ಷಣೆಯನ್ನು ನೀಡುವವರು ಯಾರು ಎಂದು ಪ್ರಶ್ನಿಸಿದರು. ಹಿಂದೂ ಜಾಗರಣಾ ಸಮಿತಿಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಮಿತಿಯ ಸದಸ್ಯ ಕುಕ್ಕೇರ ಅಜಿತ್ ಮಾತನಾಡಿ, ಹಿಂದೂ ಸಮಾಜ ಎಂದಿಗೂ ಇತರರ ತಂಟೆಗೆ ಹೋಗುವುದಿಲ್ಲ. ಜಾಗೃತ ಹಿಂದೂ ಸಮಾಜದ ನಿರ್ಮಾಣಕ್ಕಾಗಿ ಸಮಾವೇಶವನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿಯ ಸಹ ಸಂಯೋಜಕ ಪ್ರತೀಪ್, ಸದಸ್ಯರಾದ ಪ್ರತೀಜಾ ಅಚ್ಚಪ್ಪ, ಮಡಿಕೇರಿ ತಾಲ್ಲೂಕು ಸಂಚಾಲಕ ಬಾಲಕೃಷ್ಣ ರೈ ಹಾಗೂ ಸಮಿತಿ ಸದಸ್ಯ ಚಂದ್ರ ಉಡೋತ್ ಉಪಸ್ಥಿತರಿದ್ದರು.









