
ಮಡಿಕೇರಿ NEWS DESK ಮಾ.28 : ಮಧ್ಯ ಪ್ರಾಚ್ಯ ಯುದ್ಧದ ಕಾರಣದಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಹೊಟೇಲ್ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರಕಾರ ಹೊಟೇಲ್ ಕಾರ್ಮಿಕರಿಗೆ ಸಹಾಯ ಧನ ನೀಡಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ನ ಲಭ್ಯತೆ ಕಡಿಮೆ ಇರುವುದರಿಂದ ಕೊಡಗು ಜಿಲ್ಲೆಯಲ್ಲೂ ಹೊಟೇಲ್ ಮಾಲೀಕರು ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಹೊಟೇಲ್ ಕಾರ್ಮಿಕರು ಕಷ್ಟ ಎದುರಿಸುತ್ತಿದ್ದಾರೆ. ಹೊಟೇಲ್ ಕೆಲಸವನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಬಡ ಕಾರ್ಮಿರಿಗೆ ಪರ್ಯಾಯ ಮಾರ್ಗವಿಲ್ಲದೆ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯಲ್ಲಿರುವ ಸಾವಿರಾರು ಸಂಖ್ಯೆಯ ಹೊಟೇಲ್ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರಕಾರ ತಕ್ಷಣ ಎಚ್ಚೆತ್ತುಕೊಂಡು ಕಾರ್ಮಿಕರ ಜೀವನೋಪಾಯಕ್ಕೆ ಪರ್ಯಾಯ ಮಾರ್ಗ ಸೂಚಿಸಬೇಕು ಮತ್ತು ಸಹಾಯ ಧನ ವಿತರಿಸಬೇಕು ಎಂದು ಎಸ್‌ಡಿಟಿಯು ನ ಜಿಲ್ಲಾ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾ಼ಕ್ ಒತ್ತಾಯಿಸಿದರು.ಕಳೆದ ಹಲವಾರು ವರ್ಷಗಳಿಂದ ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಅರ್ಹ ಫಲಾನಿಭವಿಗಳಿಗೆ ಸರಕಾರದ ವತಿಯಿಂದ ಆಶ್ರಯ, ಅಂಬೇಡ್ಕರ್ ವಸತಿ ಯೋಜನೆ ಮತ್ತು ಪಿಎಂ ಆವಾಜ಼್ ವಸತಿ ಯೋಜನೆಯಡಿ ಮನೆಗಳನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಎಸ್‌ಡಿಟಿಯು ನ ಜಿಲ್ಲಾ ಸಮಿತಿ ಸದಸ್ಯರಾದ ಸಿ.ಎ.ಅಜೀ಼ಜ್, ಕೆ.ಎಂ.ಅಲ್ತಾಫ್, ಸಾಜಿದ್ ಖಾನ್ ಮತ್ತಿತರರು ಹಾಜರಿದ್ದರು.








