
ವಿರಾಜಪೇಟೆ ಏ.3 NEWS DESK : ಪ್ರಭು ಶ್ರೀ ರಾಮನಿಗೆ ವಿಧೇಯನಾಗಿ, ಕಣ ಕಣದಲ್ಲಿ ರಾಮ ರಾಮ ಎಂದು ಭಕ್ತಿಯ ಸಾರವನ್ನು ಎತ್ತಿಹಿಡಿದ ಹನುಮನಂತೆ, ಕಣ ಕಣದಲ್ಲೂ ರಾಷ್ಟ್ರಭಕ್ತಿಯನ್ನು ಹೊಂದಿ, ಭಾರತ ಮಾತೆಗೆ ಚಿರ ಋಣಿಯಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹಾಸನ ಜಿಲ್ಲೆಯ ಬಸವ ಪಟ್ಟಣ ಮಠದ ಮಠಾಧೀಶರಾದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿಗಳು ತಿಳಿಸಿದರು. ವಿರಾಜಪೇಟೆ ತಾಲ್ಲೂಕು ಮೈದಾನದ ಅಂಜನಿ ಪುತ್ರ ವೇದಿಕೆಯಲ್ಲಿ ನಗರದ ಹÀನುಮ ಜಯಂತಿ ಆಯೋಜನಾ ಸಮಿತಿ ವತಿಯಿಂದ ಆಯೋಜಿತ ಹನುಮ ಜಯಂತಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನವನ್ನಿತ್ತರು. ನಮ್ಮ ನಡುವೆ ಇರುವ ಜಾತೀಯತೆ, ಲಿಂಗ ಅಸಮಾನತೆಯನ್ನು ತೊಲಗಿಸಿ, ಎಲ್ಲರೂ ಸರಿಸಮಾನರು ಎಂಬುದು ಬಿಂಬಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಸಾಗಬೇಕಾಗಿದೆ. ಜಾತಿ ಜಾತಿಗಳ ಮಧ್ಯೆ ಕಂದಕ, ಒಡೆದು ಆಳುವ ನೀತಿಯನ್ನು ಪ್ರತಿಪಾದಿಸುವ ಬಾಹ್ಯ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಸಿದ್ದರಾಗಬೇಕು. ಸನಾತನ ಹಿಂದೂ ಧರ್ಮ ಅವಿನಾಶಿ ಧರ್ಮ. ಇದಕ್ಕೆ ಆರಂಭ ತಿಳಿದಿಲ್ಲ, ಅಂತ್ಯವು ಇಲ್ಲ.ಧರ್ಮ, ಸಂಸ್ಕøತಿ, ಪರಂಪರೆ ಮೇಲೆ ಅಕ್ರಮಣವಾದರೂ ಇಂದಿಗೂ ಹಿಂದೂ ಧರ್ಮ ಚಿರಾಯುವಾಗಿದೆ ಎಂದರು. ಪುಕ್ಕಟೆ ಭಾಗ್ಯಗಳಿಗೆ, ಹಣ, ಸಾರಾಯಿ, ಅಕ್ಕಿ, ಬಟ್ಟೆ ಆಮಿಷಗಳಿಗೆ ಬಲಿಯಾಗz, ರಾಷ್ಟ್ರದ ಬಗ್ಗೆ ಚಿಂತನೆ ನಡೆಸುವ, ಸಮಾನತೆಯ ಆಧಾರದ ಮೇಲೆ ರಾಷ್ಟ್ರದ ಹಿತಕಾಯುವ, ಸದಾ ಒಳಿತನ್ನು ಬಯಸುವ ನಾಯಕರನ್ನು ಚುನಾಯಿಸಿ ಭವ್ಯ ಭಾರತದ ಕಲ್ಪನೆ ಹಾಗೂ ರಾಮ ರಾಜ್ಯದ ಕನಸನ್ನು ನನಸಾಗಿಸಲು ಹಿಂದೂಗಳು ಸಂಘಟಿತರಾಗಬೇಕೆಂದು ಕರೆ ನೀಡಿದರು. ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‍ವೆಲ್, ಸುಮಾರು ಐದು ನೂರು ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ. ರಾಮ ಮಂದಿರ ನಿರ್ಮಾಣವಾದರೆ ಸಾಲದು, ಬದಲಿಗೆ ರಾಮ ರಾಜ್ಯ ನಿರ್ಮಾಣ ವಾಗಬೇಕಾಗಿದೆಯೆಂದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಸರ ಸಂಘ ಚಾಲಕರಾದ ಚಕ್ಕೇರ ಮನುರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನುಮ ಜಯಂತಿ ಆಯೋಜನಾ ಸಮಿತಿಯ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ ವಹಿಸಿದ್ದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ನಾಟ್ಯಾಂಜಲಿ ಹಾಗೂ ನಾಟ್ಯ ಮಯೂರಿ ನೃತ್ಯ ಶಾಲೆಯ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು. ರವಿ ಭೂತನಕಾಡು ವಂದೇಮಾತರಂ ಗೀತೆಯನ್ನು ಹಾಡಿದರು. ಅಂಬಿಕಾ ಉತ್ತಪ್ಪ ಸ್ವಾಗತಿಸಿ, ಕೌಶಿಕ್, ರಾಧಿಕಾ ನಿರೂಪಿಸಿ,ಅಂಜಪರವಂಡ ಅನಿಲ್ ಮಂದಣ್ಣ ವಂದಿಸಿದರು. :: ಭವ್ಯ ಶೋಭಾ ಯಾತ್ರೆ :: ನಗರದ ಬಾಲ ಆಂಜನೇಯ ದೇವಾಲಯ ಹಾಗೂ ಹನುಮ ಜಯಂತಿ ಆಯೋಜನಾ ಸಮಿತಿ ವತಿಯಿಂದ ನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ ಸಂಬ್ರಮದಿಂದ ನಡೆಯಿತು. ಬೆಳ್ಳಿ ರಥದಲ್ಲಿ ಹನುಮಂತನ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಎಂಎಲ್‍ಸಿ ಸುಜಾ ಕುಶಾಲಪ್ಪ ಮೆರವಣಿಗೆಗೆ ಚಾಲನೆ ನೀಡಿದರು.ಬಾಲ ಆಂಜನೇಯ ದೇವಾಲಯದಿಂದ ಬಂದ ರಥದ ಮೆರವಣಿಗೆ ಮಾರಿಯಮ್ಮ ದೇವಾಲಯದಿಂದ ಆರಂಭವಾಗಿ ಮುಖ್ಯ ರಸ್ತ್ತೆಗಳಲ್ಲಿ ನಡೆಯಿತು.









