
ಮಡಿಕೇರಿ ಏ.7 NEWS DESK : ನಾಪೋಕ್ಲುವಿನಲ್ಲಿ ಸಂಭ್ರಮದಿಂದ ನಡೆಯುತ್ತಿರುವ ಚೇನಂಡ ಕಪ್ ಹಾಕಿ ಉತ್ಸವದ ಪ್ರಯುಕ್ತ ಆಯೋಜನಾ ಸಮಿತಿ ಈಗಾಗಲೆ ಜಿಲ್ಲೆಯ ವಿವಿಧೆಡೆಗಳಲ್ಲಿ 2800ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟಿದೆಯಲ್ಲದೆ, ಪಂದ್ಯಾವಳಿಯಲ್ಲಿ ದಾಖಲಾಗುವ ಪ್ರತಿ ಗೋಲಿಗೊಂದು “ಗಿಡ” ಎನ್ನುವ ಗುರಿ ಹೊಂದಿರುವುದಾಗಿ ಚೇನಂಡ ಕಪ್ ಹಾಕಿ ಉತ್ಸವ ಆಯೋಜನಾ ಸಮಿತಿಯ ಪ್ರಮುಖರು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಪ್ರಮುಖರು ಮಾತನಾಡಿ, ಕ್ರೀಡೆಯೊಂದಿಗೆ ಪರಿಸರಕ್ಕೂ ಒತ್ತು ನೀಡುವ ಚಿಂತನೆಯಂತೆ ಚೇನಂಡ ಕುಟುಂಬಸ್ಥರು ಈಗಾಗಲೆ ಟಿ.ಶೆಟ್ಟಿಗೇರಿ ಅಯ್ಯಪ್ಪ ದೇವಸ್ಥಾನಕ್ಕೆ ಒಳಪಟ್ಟ ಜಾಗದಲ್ಲಿ 1500 ಗಿಡಗಳನನ್ನು, ಕರಡ ಮಲೆತಿರಿಕೆಯಲ್ಲಿ, ಕೋಕೇರಿ ಭಗವತಿ ದೇವಸ್ಥಾನದ ಆವರಣ, ಸಿದ್ದಾಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೃಕ್ಷಾರೋಪಣ ಮಾಡಿದೆ. ಸೋಮವಾರಪೇಟೆಯಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಗಿಡ ನೆಡುವ ಕಾರ್ಯದಲ್ಲಿ ಕೈ ಜೋಡಿಸಿ ಗಮನ ಸೆಳೆದಿರುವುದಾಗಿ ಹೇಳಿದರು. :: ಸೋತ ತಂಡಕ್ಕೊಂದು “ಜೇನು ಪೆಟ್ಟಿಗೆ” :: ಪಂದ್ಯಾವಳಿಯಲ್ಲಿ 383 ತಂಡಗಳು ಪಾಲ್ಗೊಂಡಿದ್ದು, ಆರಂಭಿಕ ಸುತ್ತಿನ ಪಂದ್ಯಗಳು ಕುತೂಹಲ ಭರಿತವಾಗಿ ನಡೆಯುತ್ತಿವೆ. ಮೊದಲ ಸುತ್ತಿನ ಪಂದ್ಯಗಳಲ್ಲಿ ಯಾವೆಲ್ಲ ತಂಡಗಳು ಪರಾಭವಗೊಳ್ಳುತ್ತಿವೆ, ಆ ತಂಡಗಳಿಗೆ ಒಂದು “ಜೇನು ಪೆಟ್ಟಿಗೆ”ಯನ್ನು ಪಂದ್ಯಾವಳಿಯ ಸವಿ ನೆನಪಿಗಾಗಿ ಹಾಗೂ ಜೇನು ಕೃಷಿಯ ಪುನಶ್ಚೇತನಕ್ಕೆ ಪೂರಕವಾಗಿ ನೀಡಲಾಗುತ್ತಿದೆಯೆಂದು ಮಾಹಿತಿಯನ್ನಿತ್ತರು. :: ವಿಚಾರ ಸಂಕಿರಣ :: ಪಂದ್ಯಾವಳಿಯ ಜೊತೆಯಲ್ಲೆ ಕಾಫಿ ಮಂಡಳಿಯ ಸಹಕಾರದೊಂದಿಗೆ ಮುಂದಿನ ಏ.12ರಂದು ಕಾಫಿ ಕೃಷಿಯ ಕುರಿತಾದ ವಿಚಾರ ಸಂಕಿರಣವನ್ನು, ಏ.19 ರಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಸಹಕಾರದೊಂದಿಗೆ ಜೇನು ಕೃಷಿಯ ನಿರ್ವಹಣೆ ವಿಷಯದ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.ಈ ವಿಚಾರ ಸಂಕಿರಣಗಳು ಆಯಾ ದಿನದಂದು ಬೆ.11 ಗಂಟೆಗೆ ಆರಂಭಗೊಳ್ಳಲಿದೆಯೆಂದು ತಿಳಿಸಿದರು. :: ಕೊಡವ ಕಲಾ ಸಂಸ್ಕøತಿ ತರಬೇತಿ :: ಚೇನಂಡ ಹಾಕಿ ಉತ್ಸವ ಸಮಿತಿಯು ನಾಪೋಕ್ಲು ಕೊಡವ ಸಮಾಜದ ಸಹಕಾರದೊಂದಿಗೆ ಏ.10 ರಂದು ಕೊಡವ ಸಮುದಾಯದ ಸಾಂಸ್ಕøತಿಕ ಕಲಾ ಪ್ರಕಾರಗಳಾದ ಬಾಳೋಪಾಟ್, ಉಮ್ಮತ್ತಾಟ್‍ಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ವಿವರಗಳನ್ನಿತ್ತರು. ಈ ಎಲ್ಲಾ ಚಟುವಟಿಕೆಗಳ ಜೊತೆಯಲ್ಲೆ ಮುಂದಿನ ದಿನಗಳಲ್ಲಿ ಕೊಡವ ಕಟುಂಬಗಳ ನಡುವಣ 100*4 ರಿಲೇ ಸ್ಪರ್ಧೆ, ಮ್ಯಾರಥಾನ್ ಸ್ಪರ್ಧೆಗಳನ್ನು ಹಾಗೂ ಆಕರ್ಷಕ ಶ್ವಾನ ಪ್ರದರ್ಶನವನ್ನೂ ನಡೆಸಲಾಗುವುದೆಂದು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಚೇನಂಡ ಹಾಕಿ ಉತ್ಸವ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಚೇನಂಡ ಮನು ಮಾದಯ್ಯ, ಮಾಧ್ಯಮ ವಕ್ತಾರರಾದ ಚೇನಂಡ ಸುರೇಶ್ ನಾಣಯ್ಯ, ನಿರ್ದೇಶಕರುಗಳಾದ ಚೇನಂಡ ಜೆಪ್ಪು ದೇವಯ್ಯ, ಗಿರೀಶ್ ಪೂಣಚ್ಚ, ಚೇನಂಡ ಅಜಿತ್ ಪೂಣಚ್ಚ ಉಪಸ್ಥಿತರಿದ್ದರು.









