ಮಡಿಕೇರಿ, NEWS DESK ಏ.8 : ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ ಕೇರಳದ ಮಹಿಳೆ ಜಿ.ಎಸ್.ಶರಣ್ಯ (36) ನಾಪತ್ತೆ ಪ್ರಕರಣ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಮುಖರು ನಾಪೋಕ್ಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪೊಕ್ಕುಳಂಡ್ರ ಧನೋಜ್(ದಿವ್ಯ) ಅವರು ಠಾಣಾಧಿಕಾರಿ ರಾಘವೇಂದ್ರ ಅವರಿಗೆ ದೂರು ನೀಡಿದರು. ನಂತರ ಮಾತನಾಡಿದ ಅವರು ನಾಪತ್ತೆಯಾಗಿ 3 ದಿನಗಳ ಬಳಿಕ ಪತ್ತೆಯಾದ ಪ್ರಕರಣದ ಬಗ್ಗೆ ನಮಗೆ ಸಂಶಯವಿದೆ. ಇದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಜನರಿಗೆ ಸತ್ಯಾಸತ್ಯತೆಯನ್ನು ತಿಳಿಸಬೇಕೆಂದು ಒತ್ತಾಯಿಸಿದರು.
ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಿಜೆಪಿ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷ ಪಾಡಿಯಂಡ ಕಟ್ಟಿಕುಶಾಲಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೊಳಿಯಾಡಿರ ಸಂತು ಸುಬ್ರಮಣಿ ಮತ್ತಿತರರು ಶರಣ್ಯ ಪ್ರಕರಣದ ತನಿಖೆಗೆ ಆಗ್ರಹಿಸಿದರು.








