
ಮಡಿಕೇರಿ NEWS DESK ಏ.8 : ಕೊಡಗು ಜಿಲ್ಲೆಯ ನಾಪೋಕ್ಲು ವ್ಯಾಪ್ತಿಯ ತಂಡಿಯoಡಮೋಳ್ ಬೆಟ್ಟದಲ್ಲಿ ಚಾರಣಕ್ಕೆಂದು ತೆರಳಿ ಮೂರು ದಿನಗಳ ನಂತರ ಪತ್ತೆಯಾದ ಕೇರಳದ ಮಹಿಳೆ ಜಿ.ಎಸ್.ಶರಣ್ಯ (36) ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಬಿಜೆಪಿಯ ಸೋಮವಾರಪೇಟೆ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಟ್ಟ ಅರಣ್ಯದಿಂದ ಕೂಡಿರುವ ಬೆಟ್ಟದಲ್ಲಿ ಚಾರಣಕ್ಕೆಂದು ಏಕಾಂಗಿಯಾಗಿ ಬಂದ ಜಿ.ಎಸ್.ಶರಣ್ಯ ಅವರ ನಡೆಯ ಬಗ್ಗೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳು ವ್ಯಕ್ತವಾಗಿದೆ. ಚಾರಣಕ್ಕೆಂದು ತೆರಳಿ ದಾರಿ ತಪ್ಪಿದ ನೆಪವೊಡ್ಡಿ ನಾಪತ್ತೆಯಾಗಿದ್ದ ಆಕೆ ಯಾವುದೇ ಆತಂಕವಿಲ್ಲದೆ ಮೂರು ದಿನಗಳ ನಂತರ ಪತ್ತೆಯಾಗಿದ್ದು, ಪ್ರಕರಣದ ಹಿಂದೆ ದುರುದ್ದೇಶವಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮೂರು ದಿನಗಳ ಕಾಲ ಕೇವಲ ನೀರಿನಿಂದ ಜೀವಿಸಿದ್ದೆ ಎಂದು ಹೇಳಿಕೆ ನೀಡಿರುವ ಶರಣ್ಯ, ಯಾವುದೇ ಆಯಾಸವಿಲ್ಲದೆ ಮರಳಿರುವುದು ವೈದ್ಯಕೀಯ ಕ್ಷೇತ್ರದಲ್ಲೂ ಸಂಶಯವನ್ನು ಹುಟ್ಟು ಹಾಕಿದೆ. ಎಲ್ಲಾ ಸಂಶಯಗಳಿಗೂ ಉನ್ನತ ಮಟ್ಟದ ತನಿಖೆ ಉತ್ತರ ನೀಡಲಿದ್ದು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶರಣ್ಯ ಮೀಸಲು ಅರಣ್ಯ ಪ್ರದೇಶವನ್ನು ಪ್ರವೇಶಿಸಿರುವುದರಿಂದ ಅರಣ್ಯ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಈಕೆ ಬಳಸಿದ್ದ ಮೊಬೈಲ್ ಸಿಮ್ ಗಳನ್ನು ತನಿಖೆಗೆ ಒಳಪಡಿಸಬೇಕು. ಪತ್ತೆ ಕಾರ್ಯಕ್ಕೆ ಸಾರ್ವಜನಿಕರ ತೆರಿಗೆ ಹಣ ಬಳಕೆಯಾಗಿರುವುದರಿಂದ ಇದನ್ನು ಶರಣ್ಯ ಅವರಿಂದ ವಸೂಲಿ ಮಾಡಬೇಕು ಎಂದು ಕಂಠಿ ಕಾರ್ಯಪ್ಪ ಆಗ್ರಹಿಸಿದ್ದಾರೆ.
ಚಾರಣ ಮತ್ತು ಪ್ರವಾಸಿತಾಣಗಳಲ್ಲಿ ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.








