
ಮಡಿಕೇರಿ ಏ.8 NEWS DESK : ಕೊಡಗಿನಲ್ಲಿ ಕಾಡಾನೆ ಉಪಟಳ ಮಿತಿ ಮೀರಿದ್ದು, ಇಂದು ಕಾಡಾನೆ ದಾಳಿಗೆ ಬೆಳೆಗಾರೊಬ್ಬರು ಬಲಿಯಾಗಿದ್ದಾರೆ. ಕಳೆದ ಮೂರೂವರೆ ತಿಂಗಳಿನಲ್ಲಿ ಕಾಡಾನೆಯಿಂದ 6 ಸಾವುಗಳು ಸಂಭವಿಸಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಹೋಬಳಿಯ ಕಾಯಿಮಾನಿ ಗ್ರಾಮದಲ್ಲಿ ಇಂದು ಮುಂಜಾನೆ ಕಾಡಾನೆಯೊಂದರ ದಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಯಿಮಾನಿ ನಿವಾಸಿ ಮೂಕಳಮಾಡ ರತ್ತು (54) ಎಂಬುವವರೇ ಸಾವನ್ನಪ್ಪಿರುವ ದುರ್ದೈವಿ. ರತ್ತು ಅವರು ಕಾಯಿಮಾನಿ-ಕುರ್ಚಿ ಗ್ರಾಮಗಳ ನಡುವೆ ಇರುವ ತಮ್ಮ ಕಾಫಿ ತೋಟಕ್ಕೆ ಎಂದಿನಂತೆ ತೆರಳುತ್ತಿದ್ದರು. ಈ ಸಂದರ್ಭ ಏಕಾಏಕಿ ಕಾಡಾನೆಯೊಂದು ಇವರ ಮೇಲೆ ದಾಳಿ ಮಾಡಿ ತುಳಿದಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡ ರತ್ತು ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ ಕುರ್ಚಿ ಮತ್ತು ಕಾಯಿಮಾನಿ ವಿಭಾಗದಲ್ಲಿ 8 ರಿಂದ 10 ಕಾಡಾನೆಗಳು ಬೀಡುಬಿಟ್ಟಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. *ಸಚಿವರ ಸಂತಾಪ* ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಮಾನವ- ಆನೆ ಸಂಘರ್ಷ ತಡೆಯಲು ಸರಕಾರ ಮತ್ತು ಇಲಾಖೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ. ಜೀವಕ್ಕೆ ಬೆಲೆ ನೀಡಲು ಸಾಧ್ಯವೇ ಇಲ್ಲ. ಈ ನೋವಿನ ಸಂದರ್ಭದಲ್ಲಿ ನೊಂದ ಕುಟುಂಬದ ಜೊತೆ ಸರಕಾರವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆನೆಗಳ ಸಮಸ್ಯೆ ಪರಿಹರಿಸಲು ಆನೆ ಧಾಮ ಮಾಡುವ ಬಗ್ಗೆ ಸರಕಾರ ಯೋಜನೆ ರೂಪಿಸಿತ್ತು. ಅದಕ್ಕೆ ಕೇಂದ್ರ ಸರಕಾರದಿಂದ ಅನುಮತಿ ಸಿಗುವಲ್ಲಿ ತೊಡಕಾಗಿದೆ. ಈ ಸಮಸ್ಯೆ ಪರಿಹರಿಸಿಕೊಂಡು ಆನೆ ಧಾಮ ನಿರ್ಮಾಣದ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.









