
ಮಡಿಕೇರಿ ಏ.11 NEWS DESK : ಕೊಡಗು ಜಿಲ್ಲಾ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ನಡೆದಿದ್ದ 9 ಕಳವು ಪ್ರಕರಣಗಳನ್ನು ಬೇಧಿಸಿ ಒಟ್ಟು 20 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದು, ಅದನ್ನು ಮಾಲೀಕರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ ವಿವಿಧ ಕಳವು ಪ್ರಕರಣಗಳಲ್ಲಿ ಒಟ್ಟು 228.19 ಗ್ರಾಂ ಚಿನ್ನಾಭರಣ, 2 ಕೆ.ಜಿ. 422 ಗ್ರಾಂ ಬೆಳ್ಳಿ ಆಭರಣ, 6.97 ಲಕ್ಷ ರೂ. ನಗದು, 6495 ಕೆ.ಜಿ ಕಾಫಿ, 75 ಕೆ.ಜಿ ಕರಿಮೆಣಸು, 5 ಚೀಲ ಪಾರ್ಚ್‍ಮೆಂಟ್ ಕಾಫಿ, 2 ಕಾರು, 1 ದ್ವಿಚಕ್ರ ವಾಹನ, 5 ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಮೊಬೈಲ್ ಕಳೆದು ಹೋದ ಪ್ರಕರಣದಡಿ ಒಟ್ಟು 54 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ. ವಿವಿಧ ಕಳವು ಪ್ರಕರಣಗಳಲ್ಲಿ ಸ್ವತ್ತುಗಳನ್ನು ಕಳೆದುಕೊಂಡ ಮಾಲೀಕರಿಗೆ ಕಾನೂನಾತ್ಮಕವಾಗಿ ಹಸ್ತಾಂತರ ಮಾಡಲಾಗುತ್ತದೆ. ಸ್ವತ್ತುಗಳ ವಿವರ ಮತ್ತು ಸಂಪೂರ್ಣ ಮಾಹಿತಿ ಇಲಾಖೆ ಬಳಿ ಇದ್ದು, ಸ್ವತ್ತುಗಳ ಮಾಲೀಕರಿಗೂ ಈ ಕುರಿತು ಆಯಾ ಠಾಣೆ ವ್ಯಾಪ್ಯಿಯಿಂದ ಸಂಪರ್ಕ ಮಾಡಿ ಮಾಹಿತಿ ನೀಡಲಾಗಿದೆ. ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ಸ್ವತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳ ಶ್ರಮ ಅಧಿಕಾರಿಗಳ ಮಾರ್ಗದರ್ಶನವೂ ಇದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಎಸ್.ಪಿ. ಬಿಂದುಮಣಿ ಹೇಳಿದರು. ಮೊಬೈಲ್ ಕಳೆದುಕೊಂಡ ಸಂದರ್ಭ ಸಮೀಪದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು. ಇದರಿಂದ ಶೀಘ್ರದಲ್ಲಿಯೇ ಮೊಬೈಲ್ ಫೋನ್‍ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯ ನಂತರ ಸ್ವತ್ತುಗಳ ಮಾಲೀಕರಿಗೆ ಎಸ್.ಪಿ ಆರ್.ಎನ್.ಬಿಂದುಮಣಿ ಅವರು ಚಿನ್ನಾಭರಣ, ನಗದು, ಮೊಬೈಲ್ ಫೋನ್‍ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.









