
ಮಡಿಕೇರಿ ಏ.13 NEWS DESK : ನಿವೇಶನಕ್ಕಾಗಿ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಬಡ ಕುಟುಂಬಗಳು ಬಳಸುತ್ತಿದ್ದ ಬಾವಿ ನೀರನ್ನು ಕಿಡಿಗೇಡಿಗಳು ಕಲುಷಿತಗೊಳಿಸಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋತ್ರಿಕಾಡು ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲಾ ಬಹುಜನ ಕಾರ್ಮಿಕ ಸಂಘಟನೆ ಹಾಗೂ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕೋತ್ರಿಕಾಡು ಎಂಬಲ್ಲಿ ನಿವೇಶನಕ್ಕಾಗಿ ಒತ್ತಾಯಿಸಿ ಸುಮಾರು 185 ಕುಟುಂಬಗಳು ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನಾಕಾರರು ಬಳಸುತ್ತಿದ್ದ ಕುಡಿಯುವ ನೀರಿನ ಬಾವಿಗೆ ಕಿಡಿಗೇಡಿಗಳು ಬಟ್ಟೆ ಒಗೆಯುವ ಸರ್ಫ್ ಪೌಡರ್ ಹಾಕಿ ಕಲುಷಿತಗೊಳಿಸಿದ್ದಾರೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿ ಪ್ರತಿಭಟನಾಕಾರರು ಅಳಲನ್ನು ತೋಡಿಕೊಂಡ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಆಲೀರ ರಶೀದ್ ಅವರು ಟ್ಯಾಂಕರ್ ಮೂಲಕ ಹೋರಾಟಗಾರರಿಗೆ ಕುಡಿಯುವ ನೀರು ಸರಬರಾಜಿನ ವ್ಯವಸ್ಥೆ ಮಾಡಿದರು. ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಯತಿರಾಜ್ ಸೂಚನೆ ಮೇರೆಗೆ ಆರೋಗ್ಯ ಸಿಬ್ಬಂದಿಗಳು ಪ್ರತಿಭಟನಾನಿರತರ ಆರೋಗ್ಯ ತಪಾಸಣೆ ಮಾಡಿದರು. ಅಗತ್ಯವಿದ್ದವರಿಗೆ ಮಾತ್ರೆ ಹಾಗೂ ಔಷಧಿ ನೀಡಿದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಬಹುಜನ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಹೆಚ್.ಆರ್.ಮಾದೇಶ ಕೋತ್ರಿಕಾಡು ಪೈಸಾರಿ ಎಂಬಲ್ಲಿ ಸೂರಿಗಾಗಿ ಕಳೆದ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಇದೆ. ಈ ಭಾಗದಲ್ಲಿ ಜಿಲ್ಲಾ ಪಂಚಾಯಿತಿಗೆ ಒಳಪಟ್ಟ ಬಾವಿ ಇದ್ದು, ಅದರಿಂದ ಅಲ್ಪಸ್ವಲ್ಪ ಕುಡಿಯುವ ನೀರನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ ಬಾವಿಯೊಳಗೆ ಯಾರೋ ಕಿಡಿಗೇಡಿಗಳು ಬಟ್ಟೆ ಒಗೆಯಲು ಉಪಯೋಗಿಸುವ ಸರ್ಫ್ ಪೌಡರ್ ಹಾಕಿ ಕುಡಿಯಲು ಯೋಗ್ಯವಿಲ್ಲದಂತೆ ಮಾಡಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಕೋತ್ರಿಕಾಡು ಪೈಸಾರಿ ಬಹುಜನ ಕಾರ್ಮಿಕ ಸಂಘಟನಾ ಸಮಿತಿ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಯಶೋಧ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಜೆ.ಎ.ಲಕ್ಷ್ಮಿ, ಗೀತಾ, ಕವಿತ, ಕಾವೇರಿ, ರಾಣಿ, ಕೌಶಿಕ್, ಜ್ಯೋತಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.









