
ನಾಪೋಕ್ಲು ಮೇ 14 NEWS DESK : ಮಡಿಕೇರಿ ತಾಲ್ಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಗೌರವ ಪೂರ್ವಾಕವಾಗಿ ಆಹ್ವಾನಿಸಲಾಯಿತು. ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ ನಾಪೋಕ್ಲು ಹೋಬಳಿಯ ಕಡಂಗ ಅರಪಟ್ಟು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 20 ರಂದು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಆಯ್ಕೆಯಾಗಿದ್ದು ಅವರನ್ನು ಗುರುವಾರ ಮೈಸೂರಿನ ಅವರ ನಿವಾಸದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂಪಿ ಕೇಶವ ಕಾಮತ್ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಹಾಗೂ ಸಮ್ಮೇಳನದ ಉಪ ಸಮಿತಿಯ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಭೇಟಿಯಾಗಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಮನವಿ ಮಾಡಿ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು. ಮನವಿಯನ್ನು ಮಾನ್ಯ ಮಾಡಿ ಗೌರವ ಸ್ವೀಕರಿಸಿದ ಐತಿಚಂಡ ರಮೇಶ್ ಉತ್ತಪ್ಪ ಅವರು ಇದು ನನ್ನ ಸಾಹಿತ್ಯ ಸೇವೆಗೆ ನನ್ನ ಹುಟ್ಟೂರಿನಲ್ಲಿ ಸಿಗುತ್ತಿರುವ ಮಹೋನ್ನತ ಗೌರವ ಎಂದರು. ಈ ಗೌರವ ನೀಡುತ್ತಿರುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರೂ, ಹಣಕಾಸು ಸಮಿತಿ ಅಧ್ಯಕ್ಷರೂ ಆದ ಕೋಡಿರ ವಿನೋದ್ ನಾಣಯ್ಯ, ಸಂಚಾಲಕರಾದ ಕಣಿಯರ ಜಯಪ್ರಕಾಶ್, ಆಹಾರ ಸಮಿತಿ ಅಧ್ಯಕ್ಷರಾದ ಐತಿಚಂಡ ಪ್ರಕಾಶ್ ಕಾರ್ಯಪ್ಪ, ವೇದಿಕೆ ನಿರ್ವಹಣಾ ಸಮಿತಿ ಅಚ್ಛಾಂಡಿರ ತಾರಾ ಉದಯ, ಸಮಿತಿಯ ಸದಸ್ಯರುಗಳಾದ ಬೇಪಡಿಯಂಡ ಅರುಣ, ನೆರಪಂಡ ಸತೀಶ್, ಬಟ್ಟಿಯಂಡ ಅಂಬಿಕಾ ಅಶೋಕ್, ಬಾಕಿಲನ ಮಮತಾ ಸಚಿನ್, ಸಂಧ್ಯಾ ಕಾಮತ್ ಐತಿಚಂಡ ರಮೇಶ್ ಉತ್ತಪ್ಪ ಅವರ ಪತ್ನಿ ರೇಷ್ಮಾ ರಮೇಶ್ ಮತ್ತು ಅಜಯ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









