

ಮಡಿಕೇರಿ NEWS DESK ಮೇ 15 : ನೀಟ್ ಪರೀಕ್ಷೆ ರದ್ದತಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜೊತೆಗಿನ ಚೆಲ್ಲಾಟವಾಗಿದ್ದು, ಈ ಕ್ರಮ ಖಂಡನೀಯವೆಂದು ಎನ್‌ಎಸ್‌ಯುಐ ಕೊಡಗು ಜಿಲ್ಲಾಧ್ಯಕ್ಷ ಅಬ್ದುಲ್ ರಾಶೀದ್ ಪಿ.ಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣದಿಂದ ನೀಟ್ ಪರೀಕ್ಷೆ ರದ್ದಾಗಿರುವುದು ಇಡೀ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹಗಲಿರುಳು ಕಷ್ಟಪಟ್ಟು ಓದಿದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಈ ಘಟನೆ ದೊಡ್ಡ ಪೆಟ್ಟು ನೀಡಿದೆ. ‘ಕೋಚಿಂಗ್ ಮಾಫಿಯಾ’, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ರಾಜಕೀಯ ವ್ಯಕ್ತಿಗಳ ನಡುವಿನ ಭ್ರಷ್ಟ ಸಂಬಂಧದಿಂದಾಗಿ ವಿದ್ಯಾರ್ಥಿಗಳು ಇಂದು ಬಲಿಪಶುಗಳಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅತಿಯಾದ ಕೇಂದ್ರೀಕರಣವು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡು, ಇಡೀ ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆಯನ್ನು ಎನ್‌ಟಿಎ ಅಡಿಯಲ್ಲಿ ತಂದಿರುವುದರಿಂದ ಈ ವ್ಯವಸ್ಥೆ ಹದಗೆಟ್ಟಿದೆ. ಇಡೀ ದೇಶಕ್ಕೆ ಒಂದೇ ಪರೀಕ್ಷೆ ಇರುವುದರಿಂದ, ಯಾವುದಾದರು ಒಂದು ಕಡೆ ಅಕ್ರಮ ನಡೆದರೂ ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಒಂದೇ ಕ್ಷಣದಲ್ಲಿ ಹಾಳು ಮಾಡಲು ಮಾಫಿಯಾಗಳಿಗೆ ದಾರಿಯಾಗಿದೆ. “ಒಂದೇ ದೇಶ, ಒಂದೇ ಪರೀಕ್ಷೆ” ಎಂಬ ನೀತಿಯು ಆವೈಜ್ಞಾನಿಕ ಮತ್ತು ಅಸುರಕ್ಷಿತವಾಗಿದೆ ಎಂದು ಟೀಕಿಸಿದ್ದಾರೆ. ತಕ್ಷಣ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರದ್ದುಗೊಳಿಸಿ, ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು. ಪರ್ಯಾಯವಾಗಿ 12ನೇ ತರಗತಿಯ (ಪಿಯುಸಿ) ಫಲಿತಾಂಶದ ಆಧಾರದ ಮೇಲೆ ಪಾರದರ್ಶಕವಾಗಿ ರಾಜ್ಯ ಮಟ್ಟದಲ್ಲೇ ಕೌನ್ಸಿಲಿಂಗ್ ನಡೆಸಿ ಸೀಟು ಹಂಚಿಕೆ ಮಾಡಬೇಕು. ಭ್ರಷ್ಟ ವ್ಯವಸ್ಥೆಯ ವಿರುದ್ಧ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ಈ ತನಿಖೆಯು ಯುದ್ಧೋಪಾದಿಯಲ್ಲಿ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿರುವ ಅಬ್ದುಲ್ ರಾಶೀದ್ ಪಿ.ಎಂ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಎನ್‌ಎಸ್‌ಯುಐ ಬಲಿಷ್ಠ ಹೋರಾಟವನ್ನು ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.








