

ಮಡಿಕೇರಿ NEWS DESK ಮೇ 15 : ಕ್ರೀಡೆ ಎಂದರೆ ಕೇವಲ ಗೆಲುವು ಸೋಲಿನ ಲೆಕ್ಕಾಚಾರವಲ್ಲ, ಅದು ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣವನ್ನು ಬೆಳೆಸುವ ಒಂದು ಮಾರ್ಗವಾಗಿದೆ ಎಂದು ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ. ಅವರು ತಿಳಿಸಿದ್ದಾರೆ,
ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ನಡೆದ ಕೊಡಗು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಮಹಿಳೆಯರ ಥ್ರೋಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕ್ರೀಡೆ ಸಂಘಟನಾ ಕೌಶಲ್ಯ, ವೇಗ ಚಾತುರ್ಯ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ. ಕ್ರೀಡೆಯನ್ನು ಕೇವಲ ಕ್ರೀಡೆಯಾಗಿ ತೆಗೆದುಕೊಳ್ಳದೆ ವೃತ್ತಿಪರವಾಗಿ ತೆಗೆದುಕೊಂಡರೆ ಜೀವನದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬಹುದು ಹಾಗೂ ಭವಿಷ್ಯದಲ್ಲಿ ಜೀವನೋಪಾಯವನ್ನು ಕಂಡುಕೊಳ್ಳಬಹುದು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳ ಜೀವನದಲ್ಲಿ ಸದಾ ಪಠ್ಯ ಪಠ್ಯೇತರ ವಿಷಯಗಳಿಗೆ ಸಮಾನ ಆದ್ಯತೆ ನೀಡುತ್ತಾ ಬರುತ್ತಿದೆ. ಶಿಸ್ತು ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿಯ ಶ್ರೀರಾಜರಾಜೇಶ್ವರಿ ವಿದ್ಯಾಸಂಸ್ಥೆಯ ನಿರ್ದೇಶಕ ದೇವರಾಜ್ ಎಚ್.ಎಸ್ ಅವರು ಯುವಜನತೆ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು, ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಳಕೆಯಿಂದಾಗಿ ಯುವ ಸಮೂಹದಲ್ಲಿ ಮಾನಸಿಕ ಖಿನ್ನತೆ, ಅಸ್ವಸ್ಥತೆ ಹೆಚ್ಚಾಗುತ್ತಿದೆ. ಇದರಿಂದ ಹೊರಬರಬೇಕಾದರೆ ಕ್ರೀಡೆ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಂಬಂಧಗಳಿಗಿಂತ, ಪ್ರೀತಿ ಪಾತ್ರರಿಗಿಂತ ಮೊಬೈಲ್‌ಗೆ ಹೆಚ್ಚು ಮಹತ್ವ ನೀಡುತ್ತಿದ್ದು, ಇದು ಸಮಾಜಕ್ಕೆ ಆಘಾತವನ್ನು ತಂದೊಡ್ಡಲಿದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ದೂರ ಮಾಡಿ ತಂದೆ-ತಾಯಿಗಳಿಗೆ, ಗುರು-ಹಿರಿಯರಿಗೆ ಗೌರವ ನೀಡುವುದರೊಂದಿಗೆ ಜೀವನದಲ್ಲಿ ಉತ್ತುಂಗಕ್ಕೇರಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿಯ ಕೆನರಾ ಬ್ಯಾಂಕ್ ಪಶ್ಚಿಮ ಶಾಖೆಯ ಹಿರಿಯ ಪ್ರಬಂಧಕ ಸುನೀಲ್ ಎಸ್.ಎನ್, ಸ್ವತಃ ಕ್ರಿಕೆಟ್ ಹಾಗೂ ಬ್ಯಾಡ್ಮಿಂಟನ್ ಆಟಗಾರನಾದ ನನಗೆ ಇಂತಹ ಕ್ರೀಡಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷವಾಗುತ್ತದೆ. ಯುವಜನತೆ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಕ್ರೀಡಾ ವಿಭಾಗದ ಸಂಯೋಜಕ ಡಾ.ತಳವಾರ್ ಬಿ.ಹೆಚ್ ಸ್ವಾಗತಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಪಿ.ಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜ್ ನ ಭೋದಕ, ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳ ಕ್ರೀಡಾಪಟುಗಳು ಹಾಗೂ ಕ್ರೀಡಾ ನಿರ್ದೇಶಕರು ಉಪಸ್ಥಿತರಿದ್ದರು. ಶ್ರೀರಾಜರಾಜೇಶ್ವರಿ ವಿದ್ಯಾಸಂಸ್ಥೆಯ ನಿರ್ದೇಶಕ ದೇವರಾಜ್ ಎಚ್.ಎಸ್ ಅವರು ಪ್ರಾಯೋಜಕತ್ವವನ್ನು ವಹಿಸಿ ನಗದು ಬಹುಮಾನ ಘೋಷಿಸಿದರು. ಅಲ್ಲದೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಿದರು.










