
ಚೆಟ್ಟಳ್ಳಿ ಜೂ.9 NEWS DESK : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಕೆ.ಪದ್ಮ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನದಲ್ಲಿ ಪೋಷಕರ ಪಾತ್ರ ಮಹತ್ತರ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಸಬೇಕು. ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಕೇವಲ ಶಿಕ್ಷಕರ ಪಾತ್ರವಲ್ಲದೆ ಪೋಷಕರ ಜವಾಬ್ದಾರಿ ಕೂಡ ಅತಿ ಹೆಚ್ಚಿನದಾಗಿರುತ್ತದೆ. ಕಾಲೇಜಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕನ್ನಡ ಉಪನ್ಯಾಸಕರಾದ ಎಂ.ಪಿ.ದಮಯಂತಿ ಮಾತನಾಡಿ, ಕಾಲೇಜಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಹಾಗೂ ಪರೀಕ್ಷೆಗೆ ಸಂಬಂಧಿಸಿದ ವಿಚಾರಗಳನ್ನು ಕೂಲಂಕುಶವಾಗಿ ತಿಳಿಸಿಕೊಟ್ಟರು. ಲೋಚನ ಆಪ್ತ ಸಮಾಲೋಚಕರಾದ ಕುಮಾರಿ ಮಾತನಾಡಿ, ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮದಿಂದ ಕೂಡಿರುತ್ತದೆ ಅವರನ್ನು ಜಾಗ್ರತೆಯಿಂದ ಹಾಗೂ ಪ್ರೀತಿ ಯಿಂದ ನೋಡಿ ಕೊಳ್ಳುವುದು ನಮ್ಮ ಕರ್ತವ್ಯ. ವಿದ್ಯಾರ್ಥಿಗಳನ್ನು ಅತೀಯಾಗಿ ಬಯ್ಯುವ ಬದಲಿಗೆ ಪ್ರೀತಿಯಿಂದ ಮಾತನಾಡಿ ಅವರ ಮನಸ್ಸನ್ನು ಗೆದ್ದರೆ ಮಾತ್ರ ಸಮಾಜಕ್ಕೆ ಉತ್ತಮಪ್ರಜೆಗಳಾಗಲು ಸಾಧ್ಯ ಎಂದು ಹೇಳಿದರು. ಪೋಷಕರಾದ ಅಸಿರ್ ಅವರು ಮಾತನಾಡಿ, ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗಣ ಅಭಿವೃದ್ಧಿಗೆ ಎನ್. ಎಸ್.ಎಸ್, ಎನ್.ಸಿ.ಸಿ, ಕ್ರೀಡೆ, ಪಠ್ಯೇತರ ಚಟುವಟಿಕೆ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಇವೆಲ್ಲವೂ ಈ ಕಾಲೇಜಿನಲ್ಲಿ ದೊರೆಯುತ್ತದೆ ಎಂದು ಹೇಳಿದರು. ಪೋಷಕ ಹಾಗೂ ಉಪನ್ಯಾಸಕರ ನಡುವೆ ಮುಕ್ತ ಸಂವಾದವನ್ನು ನಡೆಸುವುದರ ಮೂಲಕ ಕಾಲೇಜಿನ ಏಳಿಗೆಗಾಗಿ ಪೋಷಕರು ತಮ್ಮ ಸಲಹೆ, ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಸುಗಂಧಿ, ಕಾರ್ಯದರ್ಶಿಯಾಗಿ ಚೋಕಂಡ ಮಾದಪ್ಪ ಮತ್ತು ಸದಸ್ಯರುಗಳಾದ ಶಿಲ್ಪಾ, ಅನಿತಾ, ಸ್ಟಿಫನ್ ರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಆರಂಭದಲ್ಲಿ ಕಾವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕ ಮತ್ತು ಪೋಷಕ ಸಂಘದ ಸಂಚಾಲಕರಾದ ಡೈನ ಸೋಮಯ್ಯ ಸ್ವಾಗತಿಸಿದರು., ಉಪನ್ಯಾಸಕಿ ಅನುಪಮ ತಿಮ್ಮಯ್ಯ ಮತ್ತು ಪ್ರೇಮಾಂಜಲಿ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಗಾಯಿತ್ರಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಯಾಗೊಳಿಸಲಾಯಿತು.









