
ಮಡಿಕೇರಿ ಜೂ.10 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಮಡಿಕೇರಿ ಬ್ರಹ್ಮಕುಮಾರಿ ಶಾಖೆ ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಮಡಿಕೇರಿ ಶಾಖೆಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಧನಲಕ್ಷ್ಮಿ ಅವರು ಮಾತನಾಡಿ, ದಿನದ ಮಹತ್ವ ತಿಳಿಸಿದರು. ಭೂಮಿಯು ಸಮಸ್ತ ಜೀವಿಗಳಿಗೂ ಜೀವನಾಧಾರ, ಪೋಷಕ ಹಾಗೂ ಎಲ್ಲವನ್ನೂ ಸಹಿಸಿಕೊಂಡು “ಕ್ಷಮಾಪನೆ ಮತ್ತು ಕೊಡುವ ಗುಣ”ಕ್ಕೆ (ದಾನಶೀಲತೆ) ಸಂಕೇತವಾಗಿದೆ. ಭೂಮಿಯು ನಮಗೆ ನೀತಿಯ ಪಾಠವನ್ನು, ಜೀವನದ ಮೌಲ್ಯಗಳನ್ನು ಮತ್ತು ಪ್ರಕೃತಿಯ ಸೌಂದರ್ಯವನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ನಾವುಗಳು ವಿಶ್ವ ಪರಿಸರ ದಿನವನ್ನು ಒಂದು ದಿನಕ್ಕೆ ಸೀಮಿತ ಗೊಳಿಸದೇ ಸಹಸ್ರಾರು ಗಿಡಗಳನ್ನು ನೆಟ್ಟು ಪರಿಸರಕ್ಕೆ ಕೊಡಗೆ ನೀಡಬೇಕು ಎಂದು ಕರೆ ನೀಡಿದರು. ಅದೇ ರೀತಿ ಪ್ರಕೃತಿಯ ಐದು ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮೊಂದಿಗೆ ಇತರರನ್ನು ಸುಖಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡ ನೆಟ್ಟು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಅವರು ಮಾತನಾಡಿ, ಪರಿಸರ ಜ್ಞಾನವು ನಮ್ಮ ಸುತ್ತಲಿನ ಪ್ರಕೃತಿ, ಜೀವಿಗಳು ಮತ್ತು ಅವುಗಳ ನಡುವಿನ ಸಂಬಂಧವನ್ನು ಅರ್ಥಮಾಡಿ ಸಹಕಾರಿಯಾಗಿದೆ. ಇದು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು, ಮಾಲಿನ್ಯವನ್ನು ತಗ್ಗಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ಜ್ಞಾನವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರ ಕಾಳಜಿ ಹೊಂದಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿ ಸುರೇಶ್ ಕಾರಂತ್, ಮಡಿಕೇರಿ ಎಸ್‍ಬಿಐ ಶಾಖೆಯ ನಿವೃತ್ತ ಅಧಿಕಾರಿ ರೇವತಿ, ಕಾಲೇಜಿನ ಕಾಲೇಜಿನ ಪ್ರಾಧ್ಯಪಕರುಗಳಾದ ಪ್ರೊ.ಕೃಷ್ಣ ಎಂ.ಪಿ, ಪ್ರೊ.ಕೆ.ಪಿ.ನಾಗರಾಜು, ಪ್ರೊ.ತಿಪ್ಪೆಸ್ವಾಮಿ.ಇ, ಗ್ರಂಥಪಾಲಕಿ ಡಾ.ವಿಜಯಲತ ಹಾಗೂ ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು, ಮತ್ತು ಎನ್‍ಸಿಸಿ ಕೆಡೆಟ್‍ಗಳು ಪಾಲ್ಗೊಂಡಿದ್ದರು.










