
ಮಡಿಕೇರಿ ಜೂ.12 NEWS DESK : ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಆಟ-ಪಾಠ ಮತ್ತು ಸುರಕ್ಷಿತಾ ಬಾಲ್ಯ ದೊರೆಯುವುದು ಮೂಲಭೂತ ಹಕ್ಕಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಗಮನಹರಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿ.ಕೆ.ಬಸವರಾಜ್ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಡತನ, ಅಜ್ಞಾನ, ನಿರುದ್ಯೋಗ ಮತ್ತು ಸಾಮಾಜಿಕ ಸಮಸ್ಯೆಗಳ ಕಾರಣದಿಂದ ಅನೇಕ ಮಕ್ಕಳು ಕಾರ್ಖಾನೆ, ಹೋಟೆಲ್, ಅಂಗಡಿಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸಿ 14 ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಅವರು ಸಲಹೆ ಮಾಡಿದರು. ಮಕ್ಕಳು ರಾಷ್ಟ್ರದ ಅಮೂಲ್ಯ ಆಸ್ತಿ ಹಾಗೂ ಭವಿಷ್ಯದ ನಿರ್ಮಾತೃಗಳಾಗಿದ್ದು, ಶಾಲೆಯಲ್ಲಿ ಕಲಿಯಬೇಕಾದ, ಆಟವಾಡಬೇಕಾದ ಮತ್ತು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕಾದ ವಯಸ್ಸಿನಲ್ಲಿ ದುಡಿಮೆಗೆ ತಳ್ಳಲ್ಪಡುವುದು ಅತ್ಯಂತ ವಿಷಾದನೀಯ ಎಂದರು. ‘ಬಡತನ, ಅನಕ್ಷರತೆ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಬಾಲ ಕಾರ್ಮಿಕ ಪದ್ಧತಿಗೆ ಪ್ರಮುಖ ಕಾರಣವಾಗಿದೆ. ಆದರೆ ಈ ನೆಪದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ತಪ್ಪಿಸಬಾರದು ಎಂದು ಬಸವರಾಜ್ ಅವರು ನುಡಿದರು.’ ಸರ್ಕಾರ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳು, ಶಿಷ್ಯವೇತನ, ಉಚಿತ ಬಸ್‍ಪಾಸ್ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಎಷ್ಟೆ ಕಷ್ಟ ಬಂದರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮಡಿಕೇರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಹೇಳಿದರು. ‘ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಕುಂಠಿತವಾಗಲಿದೆ. ಇದರಿಂದ ಶಿಕ್ಷಣದ ಹಕ್ಕು ಮೊಟಕುಗೊಳ್ಳಲಿದೆ. ಮಕ್ಕಳ ಭವಿಷ್ಯದ ಕನಸು ನಶಿಸುತ್ತದೆ. ಆದ್ದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಬಸವರಾಜು ಹೇಳಿದರು.’ ಸಂವಿಧಾನದ ಮತ್ತು ವಿವಿಧ ಕಾನೂನುಗಳು ಮಕ್ಕಳ ರಕ್ಷಣೆಗೆ ವಿಶೇಷ ಮಹತ್ವ ನೀಡಿವೆ. ಭಾರತೀಯ ಸಂವಿಧಾನದ ಅನುಚ್ಛೇದ 24 ರ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆ, ಗಣಿ ಅಥವಾ ಇತರೆ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸಿದೆ. ಹಾಗೆಯೇ ಅನುಚ್ಛೇದ 21 ಎ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ ಎಂದು ಬಸವರಾಜು ಅವರು ವಿವರಿಸಿದರು. ‘ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು. ಅದು ಬಿಟ್ಟು ಕೆಲಸದ ಸಾಧನಗಳಲ್ಲ’ ಎಂಬ ಸಂದೇಶವನ್ನು ಎಲ್ಲೆಡೆ ಪಸರಿಸಬೇಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಸುರಕ್ಷತೆ ಮತ್ತು ಗೌರವಯುತ ಬಾಲ್ಯ ದೊರೆಯುವ ಸಂಕಲ್ಪ ಮಾಡಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಒತ್ತಿ ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ ಮಕ್ಕಳಿಗೆ ಬಾಲ್ಯ ಒಂದು ಉತ್ತಮ ಘಟ್ಟವಾಗಿದೆ. ಬಾಲ್ಯದಲ್ಲಿ ಸದಾ ಚಟುವಟಿಕೆಯಿಂದ ಇರಬೇಕು. ಅದನ್ನು ಬಿಟ್ಟು ಬಾಲ್ಯವನ್ನು ಕಸಿದುಕೊಳ್ಳಬಾರದು ಎಂದು ಅವರು ಹೇಳಿದರು. ಬಾಲ್ಯದಲ್ಲಿ ಆಟವಾಡಿದ ನೆನಪು ಸದಾ ಸ್ಮರಿಸುವಂತಿರಬೇಕು. ಇದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಕಾಣಬಹುದು. ಆದ್ದರಿಂದ ಮಕ್ಕಳಿಗೆ ಬಾಲ್ಯವ್ಯವಸ್ಥೆ ಮುದುಡದಂತೆ ಮಾಡಬಾರದು ಎಂದರು.
ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳದೆ ವಿದ್ಯಾರ್ಜನೆಗೆ ಆದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ದುಡಿಮೆಗೆ ದೂಡುವುದು ಕಡಿಮೆಯಾಗಿದೆ. ಆದರೂ ಸಹ ಸಂಪೂರ್ಣವಾಗಿ ಮಕ್ಕಳ ಬಾಲ್ಯ ವ್ಯವಸ್ಥೆಯನ್ನು ಗೌರವಿಸಿ ಅವರ ಕ್ರಿಯಾಶೀಲ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು ಎಂದು ಶುಭ ಅವರು ಸಲಹೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುವುದು ಕಾಣುತ್ತೇವೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಮಾದಕ ವಸ್ತುಗಳ ಮಾರಾಟ, ಸೇವನೆ ಕಂಡುಬಂದಲ್ಲಿ ಮಾಹಿತಿ ನೀಡುವಂತಾಗಬೇಕು. ಮುಚ್ಚಿಡುವ ಪ್ರಯತ್ನ ಆಗಬಾರದು ಎಂದರು. ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು ಆಗಿದ್ದು, ಇವುಗಳನ್ನು ನಿರ್ಮೂಲನೆ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ‘ಮಕ್ಕಳು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬೆಳೆಯುವಂತಾಗಲು ಕುಟುಂಬದಲ್ಲಿಯೇ ಉತ್ತಮ ವಾತಾವರಣ ನಿರ್ಮಾಣವಾಗಬೇಕು. ಕುಟುಂಬದಲ್ಲಿ ಪ್ರತಿನಿತ್ಯ ಅಸಮತೋಲನ ಉಂಟಾದಲ್ಲಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು ಎಂದರು.’ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಶಿಕ್ಷಣ, ಆರೋಗ್ಯ ಮತ್ತು ಶಿಸ್ತುಬದ್ಧ ಜೀವನಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಒಳ್ಳೆಯ ನೀತಿ ಮತ್ತು ಮೌಲ್ಯವನ್ನು ಕಲಿಸಬೇಕು. ಇದರಿಂದ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ಅವರು ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಘೋಷ ವಾಕ್ಯ ಪ್ರಕಟಿಸಿದೆ. ಆ ನಿಟ್ಟಿನಲ್ಲಿ ಕಲಿಕೆಗೆ ಒತ್ತು ನೀಡಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು. ಸಂವಿಧಾನವು 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಿದೆ. ಹಾಗೆಯೇ ಆರ್‍ಟಿಇ ಸೌಲಭ್ಯವನ್ನು ಜಾರಿಗೊಳಿಸಿದ್ದು, ಶಿಕ್ಷಣ ಪಡೆಯಬೇಕು ಎಂದರು. ಬಾಲಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಆ ನಿಟ್ಟಿನಲ್ಲಿ ಇವುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದರು. ಬಾಲ್ಯವ್ಯವಸ್ಥೆ ಹಾಗೂ ಕಿಶೋರ ವ್ಯವಸ್ಥೆ ಕಾರ್ಮಿಕ ಕಾಯ್ದೆ ಕುರಿತು ವಕೀಲರಾದ ಯಾಲದಾಳು ಮನೋಜ್ ಬೋಪಯ್ಯ ಅವರು ಮಾತನಾಡಿ ಕಾನೂನು, ನಿಯಮಗಳು ಏನೇ ಇದ್ದರೂ ಸಹ ಸ್ವಯಂ ನಿರ್ವಹಣೆ ಮತ್ತು ಪಾಲನೆ ಅತೀ ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಮಕ್ಕಳ ರಕ್ಷಣೆ ಮತ್ತು ಕಾನೂನು ಕಟ್ಟುಪಾಡುಗಳನ್ನು ಪಾಲಿಸುವುದು ಹಿಂದಿನಿಂದಲೂ ಇದ್ದು, ಬಾಲ್ಯ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆ ಮತ್ತು ಕೌಶಲ್ಯತೆ ಮಕ್ಕಳಲ್ಲಿ ಬೆಳೆಸಬೇಕು ಎಂದರು. ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)ತಿದ್ದುಪಡಿ ಕಾಯ್ದೆ 2026ರ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಉದ್ಯೋಗದಲ್ಲಿ ಕೆಲಸಕ್ಕೆ ನೇಮಿಸುವುದು ಕಾನೂನು ಬಾಹಿರವಾಗಿದೆ. 14 ರಿಂದ 18 ವರ್ಷ ವಯಸ್ಸಿನ ಕಿಶೋರರನ್ನು ಅಪಾಯಕಾರಿ ಉದ್ಯೋಗಗಳಲಲ್ಲಿ ಕೆಲಸಕ್ಕೆ ನೇಮಿಸುವುದನ್ನೂ ಈ ಕಾಯ್ದೆ ನಿಷೇಧಿಸಿದೆ. ಕಾನೂನು ಉಲ್ಲಂಘಿಸುವವರಿಗೆ ದಂಡ ಹಾಗೂ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ ಎಂದರು. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ 2009 ಮಕ್ಕಳಿಗೆ ಶಿಕ್ಷಣವನ್ನು ಖಚಿತಪಡಿಸುವ ಮೂಲಕ ಬಾಲಕಾರ್ಮಿಕ ಪದ್ಧತಿ ತಡೆಯಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಮಗು ದುಡಿಮೆಯಲ್ಲಿ ತೊಡಗಿರುವುದನ್ನು ಕಂಡರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರತಿಯೊಂದು ಮಗುವೂ ಶಾಲೆಗೆ ಹೋಗಬೇಕು. ಶಿಕ್ಷಣ ಪಡೆಯಬೇಕು ಮತ್ತು ಸುರಕ್ಷಿತ ಬಾಲ್ಯವನ್ನು ಅನುಭವಿಸಬೇಕು ಎಂದರು. ಕಾರ್ಮಿಕ ಇಲಾಖೆಯ ತಾಲ್ಲೂಕು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ಮಾತನಾಡಿ ಕೊಡಗು ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಜಿಲ್ಲೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸ್ಥಾಪಿಸಲಾಗಿದೆ. ಅದರಂತೆ 2017 ರಿಂದ ಇಲ್ಲಿಯವರಗೆ ಸುಮಾರು 3,455 ತಪಾಸಣೆ ಕೈಗೊಂಡು, 30 ಬಾಲಕಾರ್ಮಿಕರು ಹಾಗೂ 64 ಕಿಶೋರ ಕಾರ್ಮಿಕರು ಕಂಡು ಬಂದಿದ್ದು, ಇವರುಗಳ ಪೈಕಿ 37 ಮಕ್ಕಳನ್ನು ಪುನರ್ವಸತಿಗೊಳಿಸಲಾಗಿದ್ದು, ಇನ್ನುಳಿದ 57 ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಆರ್.ಶೀರಾಝ್ ಅಹ್ಮದ್ ಅವರನ್ನು ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸುವಲ್ಲಿ ಉತ್ತಮ ಕೆಲಸ ಮಾಡಿರುವುದಕ್ಕೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ವಿ.ಅಂಬಿಕಾ ಇತರರು ಇದ್ದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಸ್.ಶಶಿಧರ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ನಿರೂಪಿಸಿದರು. ಕಾರ್ಮಿಕ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಯಶೋಧ ಪ್ರಾರ್ಥಿಸಿದರು. ಕೊಡಗು ವಿದ್ಯಾಲಯದ ವಿದ್ಯಾರ್ಥಿನೀಯರು ನಾಡಗೀತೆ ಮತ್ತು ವಂದೇಮಾತರಂ ಗೀತೆ ಹಾಡಿದರು. ಗಿರೀಶ್ ಮತ್ತು ತಂಡದವರು ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವ ಕುರಿತು ಹಾಡು ಹಾಡಿದರು.









