
ಮಡಿಕೇರಿ NEWS DESK ಜು.29 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿನಿ0ದ ಕ್ಷೀಣಿಸಿದ್ದ ಮಳೆ ಚೇತರಿಕೆ ಕಂಡಿದೆ. ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಎರಡು ದಿನಗಳಿಂದ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಮೈಕೊರೆಯುವ ಚಳಿ, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಮಂಗಳವಾರ ರಾತ್ರಿಯಿಂದ ಉತ್ತಮ ಮಳೆೆಯಾಗುತ್ತಿದ್ದು, ದಟ್ಟ ಮಂಜು ಕವಿದಿರುವ ಪರಿಣಾಮ ಹೊಂಡ ಗುಂಡಿಗಳ ರಸ್ತೆಯಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದೊಂದು ದಿನದ ಅವಧಿಯಲ್ಲಿ 78 ಮಿ.ಮೀ. ಮಳೆ ದಾಖಲಾಗಿದೆ. ಕ್ಷೇತ್ರ ವ್ಯಾಪ್ತಿ ಮತ್ತು ನದಿ ಪಾತ್ರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ನೀರಿನ ಮಟ್ಟ ಏರಿಕೆಯಾಗಿದೆ. ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ದೊಡ್ಡ ಗಾತ್ರದ ಬಿದಿರು ಬುಡ ಸಹಿತ ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯವಸ್ತಗೊಂಡಿತ್ತು. ಮoಗಳವಾರ ರಾತ್ರಿ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಕೆ.ಜಿ.ಬೆಳ್ಳಿಯಪ್ಪ ಎಂಬುವವರು ಗಾಯಗೊಂಡಿದ್ದಾರೆ. ಸೋಮವಾರಪೇಟೆ, ವಿರಾಜಪೇಟೆ ಮತ್ತು ನಾಪೋಕ್ಲು ಭಾಗದಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. *ಮತ್ತಷ್ಟು ಮಳೆ ಬೇಕು* ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯಾಶ್ರಿತ ಭತ್ತದ ಕೃಷಿಯನ್ನು ಬಹುತೇಕ ನಡೆಸಲಾಗುತ್ತದೆ. ವರ್ಷಂಪ್ರತಿ ಜೂನ್‌ನಲ್ಲಿ ಸುರಿಯುವ ಉತ್ತಮ ಮಳೆಯನ್ನು ಆಧರಿಸಿ ಆ ತಿಂಗಳ ಕೊನೆಯ ಭಾಗ ಇಲ್ಲವೆ ಜುಲೈ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ನಡೆಸಲಾಗುತ್ತಿತ್ತು. ಈ ಬಾರಿ ಮುಂಗಾರು ದೊಡ್ಡ ಮಟ್ಟದಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭತ್ತದ ಕೃಷಿಗೆ ತೀವ್ರ ಹಿನ್ನೆಡೆಯಾಗಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರೆದರಷ್ಟೆ ಭತ್ತದ ಕೃಷಿ ನಡೆಸಲು ಸಾಧ್ಯವಾಗುತ್ತದೆ. ಗದ್ದೆಗಳಲ್ಲಿ ಅಗತ್ಯ ನೀರು ಸಂಗ್ರಹವಾದರಷ್ಟೆ ಭೂಮಿಯನ್ನು ಹದಗೊಳಿಸಿ ಬಿತ್ತನೆ ಕಾರ್ಯ ಮಾಡಬಹುದಾಗಿದ್ದು, ಜಿಲ್ಲೆಯ ಕೃಷಿಕ ಉತ್ತಮ ಮಳೆÉಯ ನಿರೀಕ್ಷೆಯಲ್ಲಿದ್ದಾನೆ.









