
ಮಡಿಕೇರಿ NEWS DESK ಜೂ.13 : ಮಡಿಕೇರಿ ನಗರದ ಹೃದಯ ಭಾಗ ಐಟಿಐ ಜಂಕ್ಷನ್ ನ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗುಂಡಿಯನ್ನು ಸ್ವಂತ ಖರ್ಚಿನಿಂದ ಮುಚ್ಚುವ ಮೂಲಕ ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಘಟಕ ಸಾಮಾಜಿಕ ಕಳಕಳಿ ಮೆರೆಯಿತು. ಐಟಿಐ ಜಂಕ್ಷನ್ ನಲ್ಲಿ ಮೂಡಿದ್ದ ದೊಡ್ಡ ಗುಂಡಿಯಿoದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು, ಅಲ್ಲದೆ ಗುಂಡಿ ಅಪಾಯವನ್ನು ಆಹ್ವಾನಿಸುತ್ತಿತ್ತು. ಇದನ್ನು ಗಮನಿಸಿದ ನಗರ ಮಹಿಳಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಧನಲಕ್ಷಿö್ಮ ಪೊನ್ನು ಅವರು ನಗರಾಧ್ಯಕ್ಷೆ ಶಶಿಕಲಾ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಶಶಿಕಲಾ ಹಾಗೂ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಅವರು ಗುಂಡಿ ಮುಚ್ಚಲು ಅಗತ್ಯವಿರುವ ಕಾಂಕ್ರೀಟ್ ಮತ್ತಿತರ ಸಾಮಾಗ್ರಿಗಳನ್ನು ಒದಗಿಸಿದರು. ಅಲ್ಲದೆ ಕಾಂಕ್ರೀಟ್ ಕೆಲಸಗಾರರನ್ನು ಒಗ್ಗೂಡಿಸಿ ರಸ್ತೆ ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಾಮಗಾರಿಯಲ್ಲಿ ತಾವು ಕೂಡ ತೊಡಗಿಸಿಕೊಂಡರು. ಧನಲಕ್ಷ್ಮಿ ಪೊನ್ನು, ಶಶಿಕಲಾ ಹಾಗೂ ಲೀಲಾ ಶೇಷಮ್ಮ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.









