
ಮಡಿಕೇರಿ ಜು.8 NEWS DESK : ಮಡಿಕೇರಿ ನಗರದಲ್ಲಿ ಸುಗಮ ವಾಹನ ಸಂಚಾರ ಮತ್ತು ಸಾರ್ವಜನಿಕರ ಹಾಗೂ ಸಾರ್ವಜನಿಕ ಆಸ್ತಿಗಳ ರಕ್ಷಣೆಯ ಹಿತದೃಷ್ಟಿಯಿಂದ ಜು.9 ರಿಂದ ಜುಲೈ, 12 ರವರೆಗೆ ಮುಂಜಾಗ್ರತಾ ಕ್ರಮವಾಗಿ ರಾಜಾಸೀಟು ಬಳಿ ವಾಹನ ನಿಲುಗಡೆ ಮತ್ತು ರಾಜಾಸೀಟ್‍ಗೆ ಸಾರ್ವಜನಿಕರ/ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಮಡಿಕೇರಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ ಭೂ ಕುಸಿತ ಉಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಹಾಲಿ ಖಾಸಗಿ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಕಡೆಯಿಂದ ಹೊರಹೋಗುವ ಎಲ್ಲಾ ವಾಹನಗಳು ರಾಜಾಸೀಟು ರಸ್ತೆಯನ್ನು ಬಳಸಿ ಸಂಚರಿಸುತ್ತಿರುವುದಾಗಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಮತ್ತು ರಾಜಾಸೀಟು ಬಳಿ ಸಾರ್ವಜನಿಕರು ಮತ್ತು ಪ್ರವಾಸಿಗರ ವಾಹನ ನಿಲುಗಡೆಗೊಳಿಸುತ್ತಿರುವ ಕಾರಣ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿರುವುದರಿಂದ, ರಾಜಾಸೀಟು ಬಳಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಆಗಾಗ್ಗೆ ಸಂಚಾರಕ್ಕೆ ಅಡಚಣೆಯಾಗುವುದು ಕಂಡು ಬಂದಿರುತ್ತದೆ. ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುವುದರಿಂದ ಹಾಗೂ ಬಸ್ ಸ್ಟಾಂಡ್ ಮಾರ್ಗವಾಗಿ ಸಂಚರಿಸುವ ವಾಹನಗಳು ರಸ್ತೆ ಕುಸಿತದಿಂದ ಪ್ರಸ್ತುತ ರಾಜಾಸೀಟು ಮಾರ್ಗವಾಗಿ ಸಂಚರಿಸುವುದರಿಂದ ರಾಜಾಸೀಟು ರಸ್ತೆಯಲ್ಲಿ ವಾಹನಗಳ ನಿಲುಗಡೆ ಮತ್ತು ವಾಹನಗಳ ಸಂಚಾರ ಅಧಿಕವಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ರಾಜಾಸೀಟು ರಸ್ತೆಯಲ್ಲಿ ಶಾಲೆಯಿದ್ದು, ವಾಹನಗಳ ಅಧಿಕ ಸಂಚಾರ ಮತ್ತು ನಿಲುಗಡೆಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜಾಸೀಟು ಬಳಿ ವಾಹನ ನಿಲುಗಡೆ ಮತ್ತು ರಾಜಾಸೀಟ್‍ಗೆ ಸಾರ್ವಜನಿಕರ/ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.








