
ಮಡಿಕೇರಿ NEWS DESK ಜು.13 : ಕೊಡಗಿನ ಕೂಡಿಗೆಯ ಸೈನಿಕ ಶಾಲೆ ದೇಶದಲ್ಲೇ ಅತ್ಯಂತ ವೇಗವಾಗಿ ಪ್ರಗತಿಯನ್ನು ಕಾಣುತ್ತಿರುವ ಸೈನಿಕ ಶಾಲೆಗಳಲ್ಲಿ ಒಂದಾಗಿದೆ ಎಂದು ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ತಿಳಿಸಿದ್ದಾರೆ. ಸೈನಿಕ ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ 7ನೇ ಹಳೇ ವಿದ್ಯಾರ್ಥಿಗಳ ಸಮಾವೇಶ “ಕೋಡಾಕ್”ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲೆಯು ಚಾರಿತ್ರ್ಯ ನಿರ್ಮಾಣ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ. ಭಾರತೀಯ ನೌಕಾಪಡೆಯ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್ ಅವರು ಪ್ರಸಕ್ತ ಸಾಲಿನ ಸೆಪ್ಟೆಂಬರ್‌ನಲ್ಲಿ ಆಡಳಿತಾಧಿಕಾರಿಯಾಗಿ ಶಾಲೆಗೆ ಸೇರ್ಪಡೆಯಾಗುವ ವಿಚಾರವನ್ನು ಹಂಚಿಕೊoಡರಲ್ಲದೆ, ಶಾಲೆಯೊಂದಿಗಿನ ಹಳೇ ವಿದ್ಯಾರ್ಥಿಗಳ ಸಂಬoಧವನ್ನು ಶ್ಲಾಘಿಸಿದರು. ಕೋಡಾಕ್ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಫೀವುಲ್ಲಾರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯೊoದಿಗಿನ ಬಾಂಧವ್ಯವನ್ನು ಬಲಪಡಿಸಲು ಮತ್ತು ಶಾಲೆಯ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಸಂಘ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ವಿವರಿಸಿದರು. *ಬಹುಮಾನ ವಿತರಣೆ* ಈ ಸಂದರ್ಭ ಕರ್ನಲ್ ಅಮರ್ ಜೀತ್ ಸಿಂಗ್ ಅವರು 2025-26ನೇ ಸಾಲಿನ ಅಕಾಡೆಮಿಕ್ ಸಾಧನಾ ಟ್ರೋಫಿ, ಯುಪಿಎಸ್‌ಸಿ ಪರೀಕ್ಷೆಯ ಸಾಧನಾ ಟ್ರೋಫಿ ಮತ್ತು ಒಟ್ಟಾಗೆ ಶ್ರೇಷ್ಠತೆಗಾಗಿ ಕಠಾರಿ ಹೌಸ್‌ಗೆ ಕಾಕ್ ಹೌಸ್ ಟ್ರೋಫಿಯನ್ನು ಪ್ರದಾನ ಮಾಡಿದರು. *ಗೌರವಾರ್ಪಣೆ* ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರಾದ ದಕ್ಷಿಣಾಮೂರ್ತಿ ಮತ್ತು ಆಗಸ್ಟ್ನಲ್ಲಿ ನಿವೃತ್ತರಾಗಲಿರುವ ಸಾಮಾನ್ಯ ನೌಕರ ಮಲ್ಲಿಕಾರ್ಜುನ್ ಅವರ ಸೇವೆಯನ್ನು ಗುರುತಿಸಿ ಹಳೆ ವಿದ್ಯಾರ್ಥಿಗಳ ಸಂಘದಿoದ ಅವರನ್ನು ಸನ್ಮಾನಿಸಲಾಯಿತು. ಹಳೇ ವಿದ್ಯಾರ್ಥಿಗಳ ಪರವಾಗಿ ಸುನಿಲ್ ಕರಳೆ ಮಾತನಾಡಿದರು. ಇದೇ ಸಂದರ್ಭ ಹಳೇ ವಿದ್ಯಾರ್ಥಿಗಳು ಮತ್ತು ಶಾಲಾ ತಂಡಗಳ ನಡುವೆ ಸೌಹಾರ್ದ ಫುಟ್ಬಾಲ್ ಮತ್ತು ಹಾಕಿ ಪಂದ್ಯ ನಡೆದುದು ವಿಶೇಷ. *ಸಾಂಸ್ಕೃತಿಕ ಕಾರ್ಯಕ್ರಮ* ಕಾರ್ಯಕ್ರಮದ ಭಾಗವಾಗಿ ಕೆಡೆಟ್‌ಗಳು ನಡೆಸಿಕೊಟ್ಟ ಗೀತಗಾಯನ, ರಾಮಾಯಣದ ಪ್ರಸಂಗಗಳನ್ನು ಬಿಂಬಿಸುವ ಆಕರ್ಷಕ ನೃತ್ಯ ಮತ್ತು ಚಂಡೆ ಮೇಳ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮವು ಹಳೇ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕೆಡೆಟ್ ನಿಶಾಂತ್ ನಾರಾಯಣ್ ಸ್ವಾಗತ ಕೋರಿ, ಕೆಡೆಟ್ ಗಿತೇಶ್ ಕಾರ್ಯಕ್ರಮ ನಿರೂಪಿಸಿದರು. ಕೆಡೆಟ್ ಚಿನ್ಮಯ ಧನ್ಯವಾದ ಸಮರ್ಪಿಸಿದರು.ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ಎನ್.ವಿಬಿನ್ ಕುಮಾರ್, ಬೋಧಕ ಮತ್ತು ಆಡಳಿತ ಸಿಬ್ಬಂದಿ, ಎನ್‌ಸಿಸಿ ಪಿಐ ಸಿಬ್ಬಂದಿ ಹಾಗೂ ಕೆಡೆಟ್‌ಗಳು ಭಾಗವಹಿಸಿದ್ದರು.









