
ಮಡಿಕೇರಿ NEWS DESK ಜು.14 : ಬೆಂಗಳೂರು ಕೊಡಗು ಗೌಡ ಸಮಾಜದ ವತಿಯಿಂದ ಮಹಿಳಾ ಘಟಕ ಹಾಗೂ ಯುವ ವೇದಿಕೆಯ ಸಹಯೋಗದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ “ವಧು-ವರರ ಸಮಾವೇಶ” ಯಶಸ್ವಿಯಾಗಿ ನಡೆಯಿತು. ಬೆಂಗಳೂರು ಕೊಡಗು ಗೌಡ ಸಮಾಜದಲ್ಲಿ ನಡೆದ ಸಮಾವೇಶದಲ್ಲಿ 90ಕ್ಕೂ ಹೆಚ್ಚು ವಧು-ವರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಪೋಷಕರೊಂದಿಗೆ ಆಗಮಿಸಿದ್ದ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಲವು ಅಭ್ಯರ್ಥಿಗಳು ಸಮುದಾಯದೊಳಗೆ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಿದರು. ಕಾರ್ಯಕ್ರಮವನ್ನು ಹಿರಿಯರಾದ ನಂಗಾರು ನಿಂಗರಾಜು ಉದ್ಘಾಟಿಸಿ ಮಾತನಾಡಿ ಯುವಜನತೆಗೆ ಜೀವನ ಸಂಗಾತಿಯ ಆಯ್ಕೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ನಿವೃತ್ತ ವಿಂಗ್ ಕಮಾಂಡರ್ ಅಯ್ಯೆಟ್ಟಿ ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಆಶಾ ಕಾಚಿಲಂಡ ಸ್ವಾಗತಿಸಿ, ಕಾರ್ಯದರ್ಶಿ ಕವಿತಾ ಕಡ್ಯದ ವಂದಿಸಿದರು. ತರುಣ್ ಕೂಡಕಂಡಿ ಹಾಗೂ ಕಲಾ ದೇವಜನ ನಿರೂಪಿಸಿದರು. ನೂತನ್ ಚೆಟ್ಟಿಮಾಡ ಹಾಗೂ ಜಗದೀಶ್ ಬೊಳ್ಳೂರು ಅಭ್ಯರ್ಥಿಗಳ ಮಾಹಿತಿ ಹಂಚಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಈ ಸಮಾವೇಶ ಸಮುದಾಯದ ಯುವಕ-ಯುವತಿಯರಿಗೆ ಹಾಗೂ ಅವರ ಕುಟುಂಬಗಳಿಗೆ ಪರಸ್ಪರ ಪರಿಚಯ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಬೆಂಗಳೂರು ಕೊಡಗು ಗೌಡ ಸಮಾಜದ ಈ ಪ್ರಥಮ ಪ್ರಯತ್ನಕ್ಕೆ ಉತ್ತಮ ಪತ್ರಿಕ್ರಿಯೆ ವ್ಯಕ್ತವಾಯಿತು ಎಂದು ಆಯೋಜಕರು ಹರ್ಷ ವ್ಯಕ್ತಪಡಿಸಿದರು.









