
ಮಡಿಕೇರಿ NEWS DESK ಜು.15 : ಆಹಾರ ಅರಸಿ ಬಂದ ಕಾಡಾನೆಗಳ ಹಿಂಡಿನಲ್ಲಿದ್ದ ಮರಿಯಾನೆಯೊಂದು ದಾರಿ ತಪ್ಪಿ ಸೆಫ್ಟಿಕ್ ಟ್ಯಾಂಕ್ ಗೆ ಬಿದ್ದ ಘಟನೆ ನೆಲ್ಯಹುದಿಕೇರಿ ವ್ಯಾಪ್ತಿಯ ನಲ್ವತ್ತೆಕ್ಕರೆಯಲ್ಲಿ ನಡೆದಿದೆ. ಕಾಡಾನೆಗಳ ಗುಂಪಿನಲ್ಲಿದ್ದ ಮರಿಯೊಂದು ನಿರ್ಮಾಣ ಹಂತದಲ್ಲಿರುವ ಹಿಂಗು ಗುಂಡಿಗೆ ಬಿದ್ದಿದೆ. ಮಂಗಳವಾರ ರಾತ್ರಿ 7.30 ಸುಮಾರಿಗೆ ಘಟನೆ ನಡೆದಿದ್ದು, ಗುಂಡಿಯಿಂದ ಮೇಲಕ್ಕೆರಲು ಮರಿಯಾನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟಿದೆ. ಕೂಡಲೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತಲುಪುವ ಮುನ್ನವೇ ತಾಯಿಯಾನೆಯ ಸಹಾಯದಿಂದ ಗುಂಡಿಯಿಂದ ಮೇಲೇರಿದ ಮರಿ ಆನೆ ಗುಂಪಿನೊಂದಿಗೆ ಕಾಡಿನತ್ತ ಸಾಗಿದೆ. *ಇಲಾಖೆ ಮನವಿ* ಕಾಡಾನೆ ಮರಿಗಳು ತೆರೆದ ಗುಂಡಿಯೊಳಗೆ ಬೀಳಬಹುದಾದ ಸಾಧ್ಯತೆ ಇರುವ ಹಿನ್ನೆಲೆ, ತಮ್ಮ ಮನೆ, ಶಾಲೆ ಮತ್ತು ತೋಟಗಳಲ್ಲಿ ಮೇಲೆ ಮುಚ್ಚದೆ ಇರುವ ಕಸದ ಗುಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ ಗುಂಡಿಗಳನ್ನು ತುರ್ತಾಗಿ ಮುಚ್ಚುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಘಟನೆ ಸಂಬಂಧ ಕುಶಾಲನಗರ ವಲಯ ಮೀನುಕೊಲ್ಲಿ ವಿಭಾಗದ DRFO ಸಚಿನ್ ನಿಂಬಾಳ್ಕರ್, ಅರಣ್ಯ ವೀಕ್ಷಕರುಗಳಾದ ಜಗದೀಶ್, ತಿಲಕ್, ಸತೀಶ್, ಆಶಿಕ್ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.









