
ಮಡಿಕೇರಿ NEWS DESK ಜು.15 : ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರನ್ನು ಭೇಟಿಯಾಗಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಕುರಿತು ಚರ್ಚಿಸಿದರು.
ಸಿಎನ್‌ಸಿ ಕೊಡವರಿಗಾಗಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತಕ್ಕಾಗಿ ದೀರ್ಘಕಾಲದ, ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬಂದಿದೆ. ವಂಶಪಾರoಪರ್ಯ ಭೂಮಿ, ಜಲಮೂಲಗಳು, “ಮಂದ್” ಮತ್ತು “ದೇವಕಾಡು”ಗಳಂತಹ ಸಾಂಸ್ಕೃತಿಕ ನೆಲೆಗಳ ರಕ್ಷಣೆ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸಲಾಗಿದೆ. ಇತ್ತೀಚೆಗೆ ಮಿತಿ ಮೀರಿದ ಭೂ ಪರಿವರ್ತನೆ, ಹೊರಗಿನ ಬಂಡವಾಳಶಾಹಿ ಸಂಸ್ಥೆಗಳ ರೆಸಾರ್ಟ್ ಮತ್ತು ಟೌನ್ ಶಿಪ್ ಗಳ ಮಾಫಿಯಾಗಳಿಂದ ಕೊಡವ ನೆಲದ ಸೂರೆ, ಜನಸಂಖ್ಯಾ ಪಲ್ಲಟ, ಮಲ್ಮ ಕುಂದ್ ಸಮಸ್ಯೆ ಮತ್ತು ತಿದ್ದುಪಡಿ ಮಾಡಲಾದ ಭೂ ಕಾಯ್ದೆಗಳ ಅಡಿಯಲ್ಲಿ ಆದಿಮಸಂಜಾತ ಹಕ್ಕುಗಳ ದುರ್ಬಲಗೊಳಿಸುವಿಕೆಯ ಪ್ರಕ್ರಿಯೆ ನಡೆಯುತ್ತಿದೆ ಎಂದು ಎನ್.ಯು.ನಾಚಪ್ಪ ಗಮನ ಸೆಳೆದರು.
ಸಿಎನ್‌ಸಿ ಬೇಡಿಕೆಗಳ ಕುರಿತು ಸಂವಿಧಾನಾತ್ಮಕ ಮತ್ತು ಕಾನೂನು ಅಂಶಗಳನ್ನು ಅಧ್ಯಯನ ಮಾಡಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಬೆಂಬಲವನ್ನು ನೀಡುವುದಾಗಿ ಬಿ.ಕೆ.ಹರಿಪ್ರಸಾದ್ ಭರವಸೆ ನೀಡಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಉಪಸ್ಥಿತರಿದ್ದರು.









