
ಚೆಟ್ಟಳ್ಳಿ NEWS DESK ಸೆ.3 : ಕೊಡವ ಸಂಪ್ರದಾಯ, ಕುಟುಂಬದ ಒಗ್ಗಟ್ಟು ಹಾಗೂ ಶೌರ್ಯದ ಪ್ರತೀಕವಾಗಿರುವ ಕೈಲ್ ಪೊಳ್ದ್ ಹಬ್ಬವನ್ನು ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಬೆಳಿಗ್ಗೆ ಕುಟುಂಬಸ್ಥರು ಐನ್ ಮನೆಯಲ್ಲಿ ಸೇರಿ ಹಿರಿಯರ ಆಶೀರ್ವಾದ ಪಡೆದರು. ಬಳಿಕ ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಅವರು ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ ಹಾಗೂ ಕತ್ತಿಯನ್ನು ಇಟ್ಟು, ಗುರುಕಾರೋಣನಿಗೆ ಮೀದಿ ನೀರಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ಕುಲದೇವರಾದ ಇಗ್ಗುತಪ್ಪ, ಕಾವೇರಮ್ಮ ಹಾಗೂ ಕುಟುಂಬದ ಗುರುಕಾರೋಣರು ಕುಟುಂಬದ ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ನಂತರ ಅಡುಗೆಕೋಣೆಯಲ್ಲಿ ಮಹಿಳೆಯರು ಗುರುಕಾರೋಣನಿಗೆ ಮೀದಿ ನೀರಿಟ್ಟು ಪೂಜೆ ಸಲ್ಲಿಸಿದರು. ಹಿರಿಯರಾದ ಪುತ್ತರಿರ ಕಾಶಿ ಸುಬ್ಬಯ್ಯ ಅವರು ಕುಟುಂಬದ ಸದಸ್ಯರಿಗೆ ಆರೋಗ್ಯ, ಐಶ್ವರ್ಯ ಹಾಗೂ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಿದರು. ಕೈಲ್ ಪೊಳ್ದ್ ಹಬ್ಬದ ವಿಶೇಷತೆಯಂತೆ ಸಾಂಪ್ರದಾಯಿಕ ಭೋಜನವನ್ನು ಕುಟುಂಬಸ್ಥರು ಸವಿದರು. ಬಳಿಕ ಹಿರಿಯರು, ಕಿರಿಯರು ಹಾಗೂ ಮಕ್ಕಳು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೊಡವ ಸಂಸ್ಕೃತಿಯಲ್ಲಿನ ಶೌರ್ಯ ಮತ್ತು ಕೋವಿ ಸಂಸ್ಕೃತಿಯನ್ನು ಪ್ರದರ್ಶಿಸಿದರು. ಕುಟುಂಬದ ಕಾರ್ಯದರ್ಶಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ವಂದಿಸಿದರು. ಬಳಿಕ ಊರಿನವರು ಮಂದ್‌ನಲ್ಲಿ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಪರಸ್ಪರ ಶುಭಾಶಯ ವಿನಿಮಯ ಹಾಗೂ ಸೌಹಾರ್ದತೆಯೊಂದಿಗೆ ಕೈಲ್ ಪೊಳ್ದ್ ಆಚರಣೆಗೆ ಸಂಭ್ರಮದ ತೆರೆ ಎಳೆಯಲಾಯಿತು. ಕೊಡವ ಸಂಸ್ಕೃತಿಯ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿರುವ ಕೈಲ್ ಪೊಳ್ದ್, ಕುಟುಂಬದ ಹಿರಿಯರಿಗೆ ಗೌರವ ಸಲ್ಲಿಸುವುದರ ಜೊತೆಗೆ ಪರಂಪರೆ, ಕುಟುಂಬದ ಒಗ್ಗಟ್ಟು ಹಾಗೂ ಶೌರ್ಯದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹಬ್ಬವಾಗಿದೆ ಎಂಬುದನ್ನು ಪುತ್ತರಿರ ಐನ್ ಮನೆಯಲ್ಲಿ ನಡೆದ ಆಚರಣೆ ಮತ್ತೊಮ್ಮೆ ಸಾರಿತು. ಚಿತ್ರ ವರದಿ : ಪುತ್ತರಿರ ಕರುಣ್ ಕಾಳಯ್ಯ









