ಮಡಿಕೇರಿ, NEWS DESK ಸೆ.24: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಸೋಮವಾರಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎಲ್. ಗೌತಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ರಾಜ್ಯದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ಹಾಗೂ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಕೊರತೆ ಇದ್ದರೂ ಸರ್ಕಾರ ಪೊಳ್ಳು ಘೋಷಣೆಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಿದ್ದಾಂತ ಟ್ರಸ್ಟ್‌ಗೆ ಸಂಬಂಧಿಸಿದ ಭೂಮಿ ವಿಚಾರದಲ್ಲಿಯೂ ಅವರು ಆರೋಪಗಳನ್ನು ಮಾಡಿದರು.
ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಿಡಬೇಕಾದ ಶೇ.18ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ವಿವಿಧ ಹಂತಗಳಲ್ಲಿ ಪರಿಹಾರ ನೀಡಲಾಗಿತ್ತು. ಆದರೆ ಪ್ರಸ್ತುತ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಸಿ & ಡಿ ಜಾಗವನ್ನು ಅರಣ್ಯಕ್ಕೆ ಹಸ್ತಾಂತರಿಸುವ ಕ್ರಮದಿಂದ ಶಾಂತಳ್ಳಿ, ಬೆಟ್ಟದಳ್ಳಿ, ತೋರೆನೂರು, ಶೆಟ್ಟಳ್ಳಿ ಹಾಗೂ ಸುರ್ಲಬ್ಬಿ ಭಾಗದ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿದರು. ಕಾಡಾನೆ ಹಾಗೂ ಹುಲಿ ದಾಳಿಗಳಿಂದ ಜನರು ಸಾವನ್ನಪ್ಪುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸದ ರಾಜ್ಯ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
‘ದಿನಕ್ಕೊಂದು ಹಗರಣ’: ಕೆ.ಜಿ. ಬೋಪಯ್ಯ
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದರು.
ಬೆಳಗ್ಗೆ ಎದ್ದು ಪತ್ರಿಕೆ ನೋಡಿದರೆ ದಿನಕ್ಕೊಂದು ಹಗರಣ ಕಾಣಿಸುತ್ತಿದೆ. ಇದು ಸಾಧನೆಗಳ ಸರ್ಕಾರವಲ್ಲ, ಹಗರಣಗಳ ಸರ್ಕಾರ ಎಂದು ಅವರು ಟೀಕಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಸೆಪ್ಟೆಂಬರ್ 17ರಂದು ಆರ್ಥಿಕ ಇಲಾಖೆಯಿಂದ ಹೊಸ ಘೋಷಣೆಗಳನ್ನು ಮಾಡದಂತೆ ಹಾಗೂ ವೇತನ ಪಾವತಿಗೆ ಹಣದ ಕೊರತೆ ಇದೆ ಎಂಬುದಾಗಿ ಪತ್ರ ಬರೆಯಲಾಗಿದೆ ಎಂದು ಹೇಳಿ, ಇದು ಸರ್ಕಾರದ ಆರ್ಥಿಕ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಬಜೆಟ್ ಮಂಡನೆಯಾದ ಕೆಲವೇ ತಿಂಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಕೊರತೆ ಎದುರಾಗಿರುವಾಗ, ಹೆಚ್ಚುವರಿ ಬಜೆಟ್‌ಗೆ ಅಗತ್ಯವಿರುವ ಹಣವನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು. ವಿವಿಧ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಘೋಷಣೆ ಮಾಡುತ್ತಿರುವ ಸರ್ಕಾರಕ್ಕೆ ಅದಕ್ಕೆ ಅಗತ್ಯವಾದ ಹಣದ ಮೂಲವೇನು ಎಂದು ಪ್ರಶ್ನಿಸಿದರು.
ಬರಪೀಡಿತ ತಾಲೂಕುಗಳ ಘೋಷಣೆ ವಿಚಾರದಲ್ಲಿಯೂ ಸರ್ಕಾರ ಜನವಿರೋಧಿ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ರೈತರ ಒತ್ತಡದ ಬಳಿಕ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಟೀಕಿಸಿದರು. ವಿಕಲಚೇತನರು, ವಿಧವೆಯರು ಹಾಗೂ ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದ ಕೇಂದ್ರದ ಪಾಲಿನ ಅನುದಾನವನ್ನು ಸಮರ್ಪಕವಾಗಿ ಬಳಸಲಾಗುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿ.ಬಿ. ಭಾರತೀಶ್ ಅವರು ಮಾತನಾಡಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಚರಣ್, ಮಾಜಿ ಪುರಸಭೆ ಅಧ್ಯಕ್ಷ ಜಯವರ್ಧನ್, ಮಧುಸೂದನ್, ಚಂದ್ರಶೇಖರ್ ಹೇರೂರು, ಎಂ.ಡಿ. ಕೃಷ್ಣಪ್ಪ, ಮಹೇಶ್ ಜೈನ್, ರಕ್ಷಿತ್ ಮಾವಾಜಿ, ವಿ.ಕೆ. ಲೋಕೇಶ್, ಮಹೇಶ್ ತಿಮ್ಮಯ್ಯ, ಕವಿತಾ ವಿರೂಪಾಕ್ಷ, ಪುಷ್ಪನಾಗೇಶ್, ಶರತ್ ಚಂದ್ರ, ಅಜೇಶ್, ಮನುಕುಮಾರ್ ರೈ, ಮೋಕ್ಷಿತ್, ದರ್ಶನ್, ಪ್ರವೀಣ್ ಮಲ್ಲಜೀರಾ, ರಾಮಕೃಷ್ಣ, ಕೆ.ಜಿ. ಮನು, ಎಂ.ವಿ. ನಾರಾಯಣ, ಅಶ್ವಥ್, ಸುಮನ್ ಗೌಡ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.







