ಮಡಿಕೇರಿ, NEWS DESK ಸೆ. 25: ಬದಲಾಗುತ್ತಿರುವ ಕಾನೂನುಗಳನ್ನು ಗಮನದಲ್ಲಿರಿಸಿಕೊಂಡು ಪ್ರತಿಯೊಬ್ಬ ಔಷಧಿ ವ್ಯಾಪಾರಿಯೂ ಪಾರದರ್ಶಕವಾಗಿ ವ್ಯವಹರಿಸುವುದರ ಜೊತೆಗೆ ಗ್ರಾಹಕರಿಗೆ ಸೇವಾ ಮನೋಭಾವದಿಂದ ಔಷಧಿಗಳನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಕರೆ ನೀಡಿದರು.
ನಗರದ ಫಾರ್ಮಾ ಭವನದಲ್ಲಿ ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಔಷಧಿ ತಜ್ಞರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಾಪಾರಿಯೂ ಆಹಾರ ಪರವಾನಗಿ ಪಡೆಯುವುದು ಕಡ್ಡಾಯ. ಉತ್ತಮ ಗುಣಮಟ್ಟದ ಆಹಾರ ಮತ್ತು ಔಷಧಿಗಳನ್ನು ಗ್ರಾಹಕರಿಗೆ ಒದಗಿಸುವುದು ವ್ಯಾಪಾರಸ್ಥರ ಆದ್ಯತೆಯಾಗಬೇಕು. ಈ ಸಂಬಂಧ ಯಾವುದೇ ದೂರುಗಳು ಬಂದಲ್ಲಿ ಅಂತಹ ವ್ಯಾಪಾರಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅನಿಲ್ ಧಾವನ್ ಎಚ್ಚರಿಸಿದರು.
ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಮಾತನಾಡಿ, ಸಮಾಜಕ್ಕೆ ಔಷಧಿ ವ್ಯಾಪಾರಸ್ಥರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಗೌರವಿಸುವ ದಿನವನ್ನು ಎಲ್ಲ ಔಷಧಿ ವ್ಯಾಪಾರಸ್ಥರು ಸಂಭ್ರಮದಿಂದ ಆಚರಿಸುವಂತಾಗಿದೆ. ಕೊಡಗು ಜಿಲ್ಲೆಯಲ್ಲಿ ಸಂಘದ ಸ್ವಂತ ಭವನ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ವಿನೂತನ ಕಾರ್ಯಕ್ರಮಗಳು ಹಾಗೂ ಸಭೆಗಳನ್ನು ಆಯೋಜಿಸುವ ಮೂಲಕ ಸಂಘವನ್ನು ಸಮಾಜಮುಖಿಯಾಗಿ ಮುನ್ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಜಯ್ ರಾಜ್ ಷಾ ಮಾತನಾಡಿ, ಔಷಧಿ ಮಾರಾಟಕ್ಕೆ ಸಂಬಂಧಿಸಿದ ಹಲವಾರು ಕಾನೂನುಗಳು ನಿರಂತರವಾಗಿ ಬದಲಾಗುತ್ತಿವೆ. ಇಂತಹ ಕಾನೂನು ಹಾಗೂ ನಿಯಮಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳುವುದು ಔಷಧಿ ವ್ಯಾಪಾರಸ್ಥರ ಕರ್ತವ್ಯವಾಗಿದೆ. ಕಾನೂನು ಪಾಲನೆ ಮಾಡುವ ಮೂಲಕ ಸರ್ಕಾರದ ನಿಯಮಗಳನ್ನು ಗೌರವಿಸಬೇಕು ಎಂದು ಸೂಚಿಸಿದರು. ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಉತ್ತಮ ಔಷಧಿ ತಜ್ಞರನ್ನು ಗುರುತಿಸಿ ಗೌರವಿಸುವ ಯೋಜನೆ ಜಾರಿಯಾಗುತ್ತಿದೆ ಎಂದರು.
ಕೊಡಗು ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ಪ್ರತಿಯೊಂದು ಹನಿ ರಕ್ತವೂ ಮಹತ್ವದ್ದಾಗಿದೆ. ರಕ್ತದಾನಿಗಳಿಂದ ಸಂಗ್ರಹವಾಗುವ ರಕ್ತವನ್ನು ತುರ್ತು ಸಂದರ್ಭಗಳಲ್ಲಿ ಅನೇಕ ಜೀವಗಳನ್ನು ಉಳಿಸಲು ಬಳಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ರಕ್ತದ ಕೊರತೆಯಿದ್ದು, ರಕ್ತದಾನ ಶಿಬಿರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವ ಅನಿವಾರ್ಯತೆ ಇದೆ ಎಂದು ಡಾ. ಕರುಂಬಯ್ಯ ತಿಳಿಸಿದರು.
ಸಂಘದ ಖಜಾಂಜಿ ಪ್ರಸಾದ್ ಗೌಡ ಅತಿಥಿಗಳನ್ನು ಪರಿಚಯಿಸಿದರು. ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಮ್ಯ ಪ್ರಸಾದ್ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಟಿ. ಪುರುಷೋತ್ತಮ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಔಷಧಿ ವ್ಯಾಪಾರಸ್ಥರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರದಲ್ಲಿ ಒಟ್ಟು 23 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಎ.ಕೆ. ವಿನೋದ್, ಪ್ರಸಾದ್, ಚಂದ್ರಶೇಖರ್, ಕಿರಣ್ ಕುಂದರ್, ಧನಂಜಯ್ ಶಾಸ್ತ್ರಿ, ಗೌತಮ್ ಪ್ರಸಾದ್, ವಿವೇಕ್ ಸೇರಿದಂತೆ ಕೊಡಗಿನ ವಿವಿಧೆಡೆಗಳಿಂದ ಆಗಮಿಸಿದ್ದ ಔಷಧಿ ವ್ಯಾಪಾರಸ್ಥರು ಭಾಗವಹಿಸಿದ್ದರು.
ಸಾಧಕ ಔಷಧಿ ವ್ಯಾಪಾರಿಗೆ ಗೌರವ
ಈ ವರ್ಷದಿಂದ ರಾಜ್ಯ ಸರ್ಕಾರವು ಔಷಧಿ ವ್ಯಾಪಾರಸ್ಥರ ದಿನಾಚರಣೆಯ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಔಷಧಿ ವ್ಯಾಪಾರಸ್ಥರನ್ನು ಗುರುತಿಸಿ ಗೌರವಿಸುತ್ತಿದೆ.
ಈ ಬಾರಿ ವಿರಾಜಪೇಟೆಯ ಶ್ರೀ ಗಣೇಶ ಮೆಡಿಕಲ್ಸ್‌ನ ಎಂ. ಸುದರ್ಶನ್ ರೈ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಕಾರ್ಯಕ್ರಮದಲ್ಲಿ ಸುದರ್ಶನ್ ರೈ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ರೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.







