
ಮಡಿಕೇರಿ ಸೆ.25 NEWS DESK : ದಲಿತ ಸಂಘಟನೆಗಳು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸ್ವಾಭಿಮಾನಿ ದಲಿತ ಸಂಘಟನೆಗಳು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದವು. ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ್ ವಿಚಾರಧಾರೆಗೆ ಸಂಬ0ಧಿಸಿದ0ತೆ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಗಳು ದಲಿತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದಲಿತ ಚಳವಳಿಯೊಂದಿಗೆ ಗುರುತಿಸಿಕೊಂಡಿರುವ ನೀಲಿ ಶಾಲಿನ ಕುರಿತು ನೀಡಿರುವ ಹೇಳಿಕೆಗೆ ಆಕ್ಷೇಪಾರ್ಹ. ಇಂತಹ ಹೇಳಿಕೆಗಳು ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ಸಾಮಾಜಿಕ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿರುವ ಸಂಘಟನೆಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿ, ಪ್ರತಾಪ್ ಸಿಂಹ ಅವರ ಹೇಳಿಕೆಗಳ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಸಂಬoಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಮೋಹನ್ ಮೌರ್ಯ, ವಿನಯ್ ಸಿ.ಪಿ.ಟಿ., ಜಯಪ್ಪ ಹಾನಗಲ್, ಡಿ.ಎಸ್.ನಿರ್ವಾಣಪ್ಪ, ಹೆಚ್.ಎಲ್.ದಿವಾಕರ್, ಹೆಚ್.ಎಸ್.ಗಣೇಶ್, ಜಯೇಂದ್ರ, ಲೀಲಾ ಶೇಷಮ್ಮ, ಗಾಯತ್ರಿ ನರಸಿಂಹ, ಪ್ರೇಮ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.









