ನಾಪೋಕ್ಲು, NEWS DESK ಸೆ.27: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಹಯೋಗದೊಂದಿಗೆ ಮಡಿಕೇರಿ ತಾಲೂಕಿನ ನಾಪೋಕ್ಲು ವೃತ್ತದ ಬೇತು ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಪೋಕ್ಲು ವೃತ್ತದ ಮೇಲ್ವಿಚಾರಕಿ ಶೀಲಾ ಅಶೋಕ್, ನಾಪೋಕ್ಲು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಆಶಾ ಕಾರ್ಯಕರ್ತೆ ಆಶಾ ಅಪ್ಪಣ್ಣ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳ ತಾಯಂದಿರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮೇಲ್ವಿಚಾರಕಿ ಶೀಲಾ ಅಶೋಕ್, ಪೋಷಣ್ ಅಭಿಯಾನದ ಉದ್ದೇಶ ಹಾಗೂ ಮಹತ್ವದ ಕುರಿತು ಮಾಹಿತಿ ನೀಡಿದರು. ಪ್ರತಿಯೊಬ್ಬರೂ ತಮ್ಮ ದೈನಂದಿನ ಆಹಾರದಲ್ಲಿ ಸ್ಥಳೀಯವಾಗಿ ದೊರೆಯುವ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸುವಂತೆ ಮನವಿ ಮಾಡಿದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ‘ಗೃಹಲಕ್ಷ್ಮಿ’ ಯೋಜನೆಯ ಮರುಪರಿಶೀಲನೆ ಕುರಿತಂತೆಯೂ ವಿವರಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯವಾಗಿ ತಯಾರಿಸಿದ ವಿವಿಧ ಬಗೆಯ ಪೌಷ್ಟಿಕಾಂಶಯುಕ್ತ ಖಾದ್ಯಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
ಈ ಸಂದರ್ಭದಲ್ಲಿ ನಾಪೋಕ್ಲು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗರ್ಭಿಣಿಯರು ಉಪಸ್ಥಿತರಿದ್ದರು.







