
ಮಡಿಕೇರಿ NEWS DESK ಅ.4 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿರುವ ಪ್ರತಿಷ್ಠಿತ **‘ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’**ಗೆ ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ವಕೀಲರಾದ ಬಾಳೆಯಡ ಕಿಶನ್ ಪೂವಯ್ಯ ಅವರು ರಚಿಸಿರುವ ‘ರಾಜಕೀಯ ಮತ್ತು ಪ್ರಕೃತಿ’ ಕೃತಿ ಆಯ್ಕೆಯಾಗಿದೆ. ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿ ಪ್ರಶಸ್ತಿಯು ಪ್ರಸಕ್ತವಾಗಿ ಮೂರನೇ ಪ್ರಶಸ್ತಿಯಾಗಿದೆ. ಪ್ರಶಸ್ತಿಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಮೂವರು ಹಿರಿಯ ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ಅಂಕಗಳನ್ನು ನೀಡಿದ್ದರು. ತೀರ್ಪುಗಾರರು ನೀಡಿದ ಅಂಕಗಳನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮಿತಿ ಒಟ್ಟುಗೂಡಿಸಿದಾಗ, ಬಾಳೆಯಡ ಕಿಶನ್ ಪೂವಯ್ಯ ಅವರ ‘ರಾಜಕೀಯ ಮತ್ತು ಪ್ರಕೃತಿ’ ಕೃತಿ ಅತಿ ಹೆಚ್ಚು ಅಂಕಗಳನ್ನು ಪಡೆದು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ವಕೀಲರು, ನೋಟರಿ ಹಾಗೂ ಸಾಹಿತಿಯಾಗಿರುವ ಕಿಶನ್ ಪೂವಯ್ಯ ಅವರು ತಮ್ಮ ರಚನಾತ್ಮಕ ಬರಹಗಳ ಮೂಲಕ ಜಿಲ್ಲೆಯ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜದ ಹಿತಚಿಂತಕರಾಗಿರುವ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನೇರನುಡಿ, ಜಾತ್ಯತೀತ ಮನೋಭಾವ ಹಾಗೂ ಎಲ್ಲ ವರ್ಗದವರೊಂದಿಗೆ ಹೊಂದಿರುವ ಆತ್ಮೀಯ ಒಡನಾಟ ಅವರಿಗೆ ವಿಶೇಷ ಗೌರವ ತಂದುಕೊಟ್ಟಿದೆ. ಸಮಾಜದ ಆಗುಹೋಗುಗಳ ಕುರಿತು ಹಲವು ಲೇಖನಗಳನ್ನು ಬರೆದಿರುವ ಕಿಶನ್ ಪೂವಯ್ಯ ಅವರು ‘ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ’ ಕೃತಿಯ ಮೂಲಕ ರಾಜಕಾರಣಿಗಳು, ವೈದ್ಯರು, ಚಿತ್ರಕಲಾವಿದರು, ಪತ್ರಕರ್ತರು, ಕ್ರೀಡಾಪಟುಗಳು, ಜನಪ್ರತಿನಿಧಿಗಳು, ಪೊಲೀಸರು ಹಾಗೂ ಸೈನಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಭಾವಿ ವ್ಯಕ್ತಿಗಳ ಸಾಧನೆಗಳನ್ನು ಪರಿಚಯಿಸಿದ್ದಾರೆ. ಕೊಡಗು ಜಿಲ್ಲಾ ವಕೀಲರ ಸಂಘ, ಮಡಿಕೇರಿಯ ಕಾವೇರಿ ಕೊಡವ ಕೇರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಸರಾ ಸಮಿತಿ, ಕಾವೇರಿ ಭಕ್ತ ಮಂಡಳಿ ಹಾಗೂ ಕೂರ್ಗ್ ಹಾಕಿ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಬಾಳೆಯಡ ಕುಟುಂಬದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. *ದತ್ತಿ ಪ್ರಶಸ್ತಿಯ ಹಿಂದಿನ ಪುರಸ್ಕೃತರು* ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಯ ಪ್ರಥಮ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ‘ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ’ ಕೃತಿಗೆ ಪಡೆದಿದ್ದರು. ದ್ವಿತೀಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗೂ ವೈದ್ಯರಾದ ಡಾ. ಕೆ.ಬಿ. ಸೂರ್ಯಕುಮಾರ್ ಅವರು ‘ವೈದ್ಯ ಕಂಡ ವಿಸ್ಮಯ’ ಕೃತಿಗೆ ಪಡೆದುಕೊಂಡಿದ್ದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ತೀರ್ಪುಗಾರರು ಕಳುಹಿಸಿದ್ದ ಅಂಕಪಟ್ಟಿಗಳನ್ನು ಪರಿಶೀಲಿಸಿ, ಅಂಕಗಳನ್ನು ಒಟ್ಟುಗೂಡಿಸಲಾಯಿತು. ಸಭೆಯಲ್ಲಿ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಸುರೈ ಉಪಸ್ಥಿತರಿದ್ದರು. ಮುಂದೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








