ಮಡಿಕೇರಿ, NEWS DESK ನ.19: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂರಕ್ಷಣೆ ಹಾಗೂ ಉತ್ತೇಜನದ ಉದ್ದೇಶದಿಂದ ವಿವಿಧ ಕುಟುಂಬಗಳು ಮತ್ತು ಸಂಘ-ಸಂಸ್ಥೆಗಳಿಗೆ ದುಡಿ, ತಾಳ ಹಾಗೂ ಒಡಿಕತ್ತಿಗಳನ್ನು ಗುರುವಾರ ವಿತರಿಸಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಪರಿಕರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಚೋಯಮಾಡಂಡ ಕುಟುಂಬಕ್ಕೆ 4 ದುಡಿ, ಪುತ್ತರೀರ ಕುಟುಂಬಕ್ಕೆ 4 ದುಡಿ, ಕೊಡಗು ಹೆಗ್ಗಡೆ ಸಮಾಜದ ಪೊಮ್ಮಕ್ಕಡ ತಂಡಕ್ಕೆ 12 ಜೊತೆ ತಾಳ (24), ನಗರದ ಸುಬ್ರಮಣ್ಯಕೇರಿಗೆ 8 ಜೊತೆ ತಾಳ (16), ವಿನಾಯಕ ಕೇರಿಗೆ 12 ಜೊತೆ ತಾಳ (24), ಸಣ್ಣುವಂಡ ಕುಟುಂಬಕ್ಕೆ 4 ದುಡಿ, ಕೊಡಗು ಹೆಗ್ಗಡೆ ಸಮಾಜ ಬಿಟ್ಟಂಗಾಲಕ್ಕೆ 1 ಒಡಿಕತ್ತಿ ಹಾಗೂ ಅರಮೇರಿಯ ಐರಿ ಸಮಾಜಕ್ಕೆ 1 ಒಡಿಕತ್ತಿಯನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು, ಕೊಡವ ಪದ್ಧತಿ, ಸಂಸ್ಕೃತಿ ಹಾಗೂ ಸಂಸ್ಕಾರಗಳು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ. ಕೊಡವ ಭಾಷಿಕ ಜನಾಂಗದ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕೊಡವ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅಕಾಡೆಮಿ ವತಿಯಿಂದ ದುಡಿ, ತಾಳ ಸೇರಿದಂತೆ ವಿವಿಧ ಸಾಂಪ್ರದಾಯಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ. ಪ್ರತಿಯೊಂದು ಬಲ್ಯಮನೆ ಹಾಗೂ ಐನ್ಮನೆಗಳಲ್ಲಿ ಹಬ್ಬ, ಮದುವೆ, ತಿಥಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ದುಡಿಯ ಬಳಕೆಯಾಗಬೇಕು. ಆಗ ಮಾತ್ರ ಕೊಡವ ಸಂಸ್ಕೃತಿಯ ಮೂಲ ಸ್ವರೂಪ ಮತ್ತು ತನ್ನತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೊಡವ ಪದ್ಧತಿ ಮತ್ತು ಸಂಸ್ಕೃತಿಯನ್ನು ಅಭಿಮಾನದಿಂದ ಉಳಿಸಿ ಬೆಳೆಸುವ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ವಿಚಾರ. ಆದರೆ, ಕೆಲವು ಕಡೆಗಳಲ್ಲಿ ಸಾವಿನ ಸಂದರ್ಭ ಮದ್ಯ ಸೇವನೆ ಹಾಗೂ ಮದ್ಯ ವಿತರಿಸುವ ಮೂಲಕ ಜನಾಂಗದ ಗೌರವಕ್ಕೆ ಧಕ್ಕೆ ಉಂಟಾಗುವ ಬೆಳವಣಿಗೆಗಳು ನಡೆಯಬಾರದು. ಸಾವಿನ ಮನೆಯ ದುಃಖದ ವಾತಾವರಣದಲ್ಲಿ ಅಂತ್ಯಕ್ರಿಯೆ ಮುಗಿಸಿ ಮನೆಗೆ ಮರಳಿದ ತಕ್ಷಣ ಮದ್ಯ ವಿತರಿಸಿ ಸಂಭ್ರಮಿಸುವುದು ಸೂಕ್ತ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.
ಪರಿಕರಗಳನ್ನು ಸ್ವೀಕರಿಸಿದ ಗಣಪತಿ ಸಿ.ಎಂ. ಮಾತನಾಡಿ, ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ಅತ್ಯಗತ್ಯವಾಗಿದೆ ಎಂದರು.
ಚೊಟ್ಟೆಯಂಡ ಸಂಜು ಕಾವೇರಪ್ಪ ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮೂಲಕ ಕೊಡವ ಭಾಷಿಕ ಜನಾಂಗಗಳ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಅಲ್ಲದೆ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೂ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಕೊಡವ ಭಾಷಿಕರು ಮದುವೆ ಸೇರಿದಂತೆ ವಿವಿಧ ಶುಭಕಾರ್ಯಗಳಲ್ಲಿ ಕುಪ್ಪೆಚಾಲೆ ಉಡುಪನ್ನು ಧರಿಸಿ ಪಾಲ್ಗೊಳ್ಳಬೇಕು. ಇದರಿಂದ ಕೊಡವ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿ ಸದಸ್ಯ ನಾಪಂಡ ಗಣೇಶ್, ಮಾಜಿ ಸದಸ್ಯ ತೋರೇರ ಮುದ್ದಯ್ಯ, ಪರಿಕರ ಸ್ವೀಕರಿಸಿದ ತೋರೇರ ಪೊನ್ನಕ್ಕಿ ಹಾಗೂ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿದರು.
ಅಕಾಡೆಮಿ ಸದಸ್ಯರಾದ ಪುತ್ತರೀರ ಪಪ್ಪು ತಿಮ್ಮಯ್ಯ, ಕೊಂಡಿಜಮ್ಮನ ಎಂ. ಬಾಲಕೃಷ್ಣ, ಕಂಬೆಯಂಡ ಡೀನಾ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಪೊನ್ನಿರ ಯು. ಗಗನ್, ಪಾನಿಕುಟ್ಟಿರ ಕೆ. ಕುಟ್ಟಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
















