ಮಡಿಕೇರಿ, NEWS DESK ಅ.6: ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯು 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ಅ.7ರಂದು ಸಂಜೆ 5 ಗಂಟೆಗೆ “ಯುವಪೀಳಿಗೆಯ ಮುಂದಿನ ಭವಿಷ್ಯಕ್ಕಾಗಿ ಡ್ರಗ್ಸ್ ಮುಕ್ತ ಕೊಡಗು” ಎಂಬ ಆಶಯದೊಂದಿಗೆ ಬೃಹತ್ ನಾಲ್ಕು ಚಕ್ರ ವಾಹನ ಜಾಥಾವನ್ನು ಆಯೋಜಿಸಲಾಗಿದೆ.
ಜಾಥಾವು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಆರಂಭಗೊಂಡು ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಕಾಲೇಜು ರಸ್ತೆ, ಹಿಲ್ ರೋಡ್ ಹಾಗೂ ಮಾರುಕಟ್ಟೆ ಮಾರ್ಗವಾಗಿ ಮಹದೇವಪೇಟೆ ಮೂಲಕ ಕೋಟೆಯ ಆವರಣ ತಲುಪಲಿದೆ.
ಖ್ಯಾತ ವೈದ್ಯರು ಹಾಗೂ ಸಮಿತಿಯ ಹಿರಿಯ ಸದಸ್ಯರಾದ ಡಾ. ಮನೋಹರ ಪಾಟ್ಕರ್ ಅವರು 50ನೇ ವರ್ಷದ ಧ್ವಜವನ್ನು ಯುವ ಸದಸ್ಯರಿಗೆ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಕೋಟೆಯ ಮುಂಭಾಗದಲ್ಲಿ ಧ್ವಜಾರೋಹಣದೊಂದಿಗೆ ಜಾಥಾ ಮುಕ್ತಾಯಗೊಳ್ಳಲಿದೆ.
ರೂ.11.50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ
ಸುವರ್ಣ ಮಹೋತ್ಸವದ ಅಂಗವಾಗಿ ಇದೇ ಪ್ರಪ್ರಥಮ ಬಾರಿಗೆ ಸುಮಾರು ರೂ.11.50 ಲಕ್ಷ ವೆಚ್ಚದಲ್ಲಿ ಬೆಂಗಳೂರಿನ ತಂಡದ ಸಹಯೋಗದೊಂದಿಗೆ ಕೋಟೆಯ ಕಟ್ಟಡವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಬುಧವಾರ ಸಂಜೆ 7 ಗಂಟೆಗೆ ಶಾಸಕ ಹಾಗೂ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಸದಸ್ಯರಾದ ಡಾ. ಮಂತರ್ ಗೌಡ ಅವರು ದೀಪ ಬೆಳಗಿಸುವ ಮೂಲಕ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಲಿದ್ದಾರೆ. ಈ ವಿಶೇಷ ದೀಪಾಲಂಕಾರವು ಅ.22ರವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿರಲಿದೆ.
ಅ.11ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮ
ನವರಾತ್ರಿಯ ಮೊದಲ ದಿನವಾದ ಅ.11ರಂದು ಬೆಳಿಗ್ಗೆ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಫಲಪಂಚಾಮೃತ ಸಹಿತ 108 ಎಳನೀರಿನ ಅಭಿಷೇಕ, ಪ್ರಸನ್ನ ಪೂಜೆ, ಬೆಳಿಗ್ಗೆ 9.30ಕ್ಕೆ ಮಹಾಪ್ರಾರ್ಥನೆ, 28 ತೆಂಗಿನಕಾಯಿಯ ಗಣಪತಿ ಯಾಗ, ಮಹಾ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿಯೊಂದಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.
ಅದೇ ದಿನ ಸಂಜೆ ಕರಗ ಮಹೋತ್ಸವ ನಡೆಯಲಿದ್ದು, ಸುಮಾರು 3ರಿಂದ 4 ಸಾವಿರ ಭಕ್ತಾಧಿಗಳಿಗೆ ಮಹದೇವಪೇಟೆಯಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ವಿಜಯದಶಮಿಯಂದು ವೈಭವದ ಮಂಟಪ
ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯ ಅ.21ರಂದು ಬೆಳಿಗ್ಗೆ ಶ್ರೀ ಕೋಟೆ ಮಹಾಗಣಪತಿ ದೇವರಿಗೆ ವಿಶೇಷ ಬೆಣ್ಣೆಯ ಅಲಂಕಾರ ಮಾಡಲಾಗುತ್ತದೆ.
ಸಂಜೆ ವಿದ್ಯುತ್ ದೀಪಾಲಂಕಾರ ಹಾಗೂ ಕಥಾ ಸಾರಾಂಶದೊಂದಿಗೆ ಸಜ್ಜುಗೊಂಡಿರುವ ಸುವರ್ಣ ಮಹೋತ್ಸವದ ಮಂಟಪವು ಶೋಭಾಯಾತ್ರೆಯೊಂದಿಗೆ ಹೊರಡಲಿದೆ. ತೀರ್ಪುಗಾರಿಕೆಯ ಪ್ರದರ್ಶನದ ಬಳಿಕ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗಲಿದ್ದು, ಬನ್ನಿ ಕಡಿದು ದೇವಾಲಯಕ್ಕೆ ಹಿಂದಿರುಗಲಿದೆ.
ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವವನ್ನು ಯಶಸ್ವಿಗೊಳಿಸಲು ನಾಡಿನ ಸರ್ವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡುವಂತೆ ಸಮಿತಿ ಮನವಿ ಮಾಡಿದೆ.








