
ಮಡಿಕೇರಿ, NEWS DESK ಅ.6: ಕೊಡಗು ಜಿಲ್ಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಹಾಗೂ ರಕ್ತದ ಅವಶ್ಯಕತೆಯನ್ನು ಪೂರೈಸುವ ಉದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕೊಡಗು ಇವರ ಸಹಯೋಗದಲ್ಲಿ ಮಂಗಳವಾರ ರಾಷ್ಟ್ರೀಯ ರಕ್ತದಾನ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. ಜಿಲ್ಲೆಯಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನ ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದೆ. ವಿವಿಧ ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಅಗತ್ಯ ಪ್ರಮಾಣದ ರಕ್ತದ ಘಟಕಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರುವಂತೆ ಪ್ರೇರೇಪಿಸಬೇಕು ಎಂದು ಅವರು ಕರೆ ನೀಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ ಮಾತನಾಡಿ, ಕಾಲೇಜುಗಳಲ್ಲಿ ಯೂತ್ ರೆಡ್‌ಕ್ರಾಸ್ ಘಟಕಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಯುವಜನರಲ್ಲಿ ರಕ್ತದಾನದ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಯುವಕರು ಸ್ವಯಂಪ್ರೇರಿತ ರಕ್ತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದ ಮೂಲಕ “ರಕ್ತದಾನ – ಮಹಾದಾನ” ಎಂಬ ಸಂದೇಶ ಸಾರಲಾಯಿತು. ಸಾರ್ವಜನಿಕರು ಹಾಗೂ ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ವದ ಮಾನವೀಯ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದ ಭರತ್, ಯಶೋಧರ ಹಾಗೂ ಅನುಷಾ ಎಂ.ಆರ್. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತ ಲಭ್ಯವಾಗುವಂತೆ ಮಾಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಡಿಟಿಸಿ ಪ್ರಾಂಶುಪಾಲರಾದ ಡಾ. ಅಜೀಜ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.









