ವಿರಾಜಪೇಟೆ, NEWS DESK ಅ.29: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಹಿರಿಯರ ವಿಭಾಗದ ಭರತನಾಟ್ಯ ಪರೀಕ್ಷೆಯಲ್ಲಿ ವಿರಾಜಪೇಟೆಯ ಅಪ್ಪಂಡೇರಂಡ ತುಶಾಲಿ ಎಂ.ಎಲ್. ಅವರು ಶೇ.90 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಮೈಸೂರಿನಲ್ಲಿ ಹಿರಿಯರ ವಿಭಾಗದ ಭರತನಾಟ್ಯ ಪರೀಕ್ಷೆ ನಡೆದಿದ್ದು, ಅಕ್ಟೋಬರ್ 28ರಂದು ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ತುಶಾಲಿ ಅವರು ಶೇ.90 ಅಂಕಗಳನ್ನು ಪಡೆಯುವ ಮೂಲಕ ಭರತನಾಟ್ಯ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ತುಶಾಲಿ ಅವರು ವಿದೂಷಿ ವಿಜಯಲಕ್ಷ್ಮಿ ಹಾಗೂ ನಂದಿನಿ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಗಾಯನ ಕ್ಷೇತ್ರದ ವಿದ್ವಾನ್ ಗುರುಪ್ರಸಾದ್ ಹಾಗೂ ಮೃದಂಗ ಕಲಾವಿದ ಸತೀಶ್ ಅವರ ಸಹಕಾರವೂ ಅವರ ಕಲಾ ಪಯಣಕ್ಕೆ ನೆರವಾಗಿದೆ.
ವಿರಾಜಪೇಟೆಯ ನಿವಾಸಿ ಕೆ.ಎಂ. ವಾಣಿ ದೇವಕ್ಕಿ ಅವರ ಪುತ್ರಿಯಾಗಿರುವ ತುಶಾಲಿ ಅವರು ಕಲೆಯ ಜೊತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಮಟ್ಟದ ಬಾಸ್ಕೆಟ್ಬಾಲ್ ಮತ್ತು ಹ್ಯಾಂಡ್ಬಾಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

















