ಮಡಿಕೇರಿ NEWS DESK ನ.3 : ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಗಳಿಗೆ ಕಳೆದ 8 ತಿಂಗಳಿನಿoದ ಸರಕಾರ ಪೌಷ್ಟಿಕ ಆಹಾರವನ್ನು ಹಂಚಿಕೆ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ಕಾಲೋನಿಗಳಿಗೆ ಮೂಲಭೂತ ಸೌಲಭ್ಯವನ್ನೇ ನೀಡಿಲ್ಲವೆಂದು ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲ್ಲೂಕು ಘಟಕ ಆರೋಪಿಸಿದೆ.
ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕುಡಿಯರ ಎ.ಮುತ್ತಪ್ಪ ಅವರು ಕಳೆದ 10 ವರ್ಷಗಳಿಂದ ಕರ್ನಾಟಕ ಸರಕಾರ ಅಂಗನವಾಡಿಗಳ ಮೂಲಕ ಅರಣ್ಯ ಮತ್ತು ಅರಣ್ಯದಂಚಿನಲ್ಲಿರುವ ಬುಡಕಟ್ಟು ಜನಾಂಗಗಳಿಗೆ ಪೌಷ್ಟಿಕ ಆಹಾರ ವಿತರಿಸುತ್ತಿತ್ತು. ಆದರೆ ಕಳೆದ 8 ತಿಂಗಳಿನಿoದ ಆಹಾರ ವಿತರಣೆ ಸ್ಥಗಿತಗೊಂಡಿದೆ. ಇದರಿಂದ ಬುಡಕಟ್ಟು ಫಲಾನುಭವಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತಕ್ಷಣ ಪೌಷ್ಟಿಕ ಆಹಾರ ವಿತರಣೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಮರಾಠ ನಾಯಕ, ಮೇದ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಅಡಿಯ ಜನಾಂಗದವರನ್ನೂ ಈ ಯೋಜನೆಗೆ ಸೇರ್ಪಡೆಗೊಳಿಸಿ ಪೌಷ್ಠಿಕ ಆಹಾರ ನೀಡಬೇಕು ಎಂದು ಆಗ್ರಹಿಸಿದರು.
*ಮೂಲಭೂತ ಸೌಲಭ್ಯದ ಕೊರತೆ* ಕಳೆದ ಮೂರು ವರ್ಷಗಳಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿಲ್ಲ. ರಸ್ತೆ ಮತ್ತು ಸಮುದಾಯ ಭವನಗಳು ನಿರ್ಮಾಣಗೊಂಡಿಲ್ಲ. ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ವಾಹನಗಳೂ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅವ್ಯವಸ್ಥೆಯಿಂದ ವಾಹನಗಳ ಸಂಪರ್ಕವೇ ಅಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಶಾಸಕರು ಹಾಗೂ ಸಂಬAಧಪಟ್ಟ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಸರಕಾರ ಕನಿಷ್ಠ ಒಂದು ಕೋಟಿ ರೂಪಾಯಿ ಅನುದಾನ ಮೀಸಲಿಟ್ಟು ಬುಡಕಟ್ಟು ಜನಾಂಗದ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕುಡಿಯರ ಎ.ಮುತ್ತಪ್ಪ ಒತ್ತಾಯಿಸಿದರು. *ಚುನಾವಣೆ ಬಹಿಷ್ಕಾರ* ಈ ಬೇಡಿಕೆಗಳನ್ನು ಸರಕಾರ ತುರ್ತಾಗಿ ಈಡೇರಿಸದಿದ್ದಲ್ಲಿ ಕೊಡಗಿನ ಬುಡಕಟ್ಟು ಜನಾಂಗ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಿದೆ ಎಂದು ಎಚ್ಚರಿಕೆ ನೀಡಿದ ಅವರು, ನಮ್ಮನ್ನು ಕೇವಲ ಮತಚಲಾವಣೆಗಷ್ಟೇ ಬಳಸಿಕೊಂಡು ನಂತರ ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಶಾಸಕರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳ ಕುರಿತು ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಡಿಯ ಸಂಘದ ಅಧ್ಯಕ್ಷ ಕೆ.ಕೆ.ಬೋಪಯ್ಯ, ಪ್ರಮುಖರಾದ ಕೆ.ಕೆ.ಪೊನ್ನಪ್ಪ, ಮೇದ ಜನಾಂಗದ ಮುಖಂಡರಾದ ಎಂ.ಡಿ.ಚoದ್ರ, ಎಂ.ಡಿ.ಚಿಣ್ಣಪ್ಪ ಹಾಗೂ ವಿನೋದ್ ಎಂ.ಎ. ಉಪಸ್ಥಿತರಿದ್ದರು.

















