ಮಡಿಕೇರಿ, NEWS DESK ನ.5: ಕೃತಕ ಬುದ್ಧಿಮತ್ತೆಯ (ಎಐ) ಆಧೀನಕ್ಕೆ ನಮ್ಮ ಬುದ್ಧಿಯನ್ನು ಕೊಟ್ಟು, ಅದು ಸೃಷ್ಟಿಸುವ ಪದಗಳನ್ನೇ ನೈಜ ಭಾಷೆಯೆಂದು ಭಾವಿಸುವ ಮೂಲಕ ಇಂದಿನ ಯುವ ಪೀಳಿಗೆ ಮೂಲ ಭಾಷೆಯ ಸೊಗಡನ್ನು ಮರೆಯುತ್ತಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಆತಂಕ ವ್ಯಕ್ತಪಡಿಸಿದರು.
ಮಡಿಕೇರಿ ಲಯನ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನಿಸುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯೇ ನಮಗೆ ಬುದ್ಧಿ ಕಲಿಸುವಂತಾಗಿದೆ. ಕನ್ನಡದಂತಹ ಸರಳ ಹಾಗೂ ಸುಂದರ ಭಾಷೆಯೂ ಎಐ ಮಾಯಾಜಾಲಕ್ಕೆ ಸಿಲುಕಿ ತನ್ನ ನೈಜತೆ ಮತ್ತು ಆನಂದವನ್ನು ಕಳೆದುಕೊಳ್ಳುತ್ತಿದೆ. ಹಲವಾರು ವರ್ಷಗಳಿಂದ ನಾವು ಬಳಸುತ್ತಿದ್ದ ಸುಂದರ ಭಾಷೆಯನ್ನು ಯಂತ್ರಗಳ ಕೈಗೆ ನೀಡಿ, ಅವು ಹೇಳಿದ್ದೇ ಸರಿ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.
ಮೊಬೈಲ್, ಕಂಪ್ಯೂಟರ್ ಹಾಗೂ ಎಐ ವ್ಯವಸ್ಥೆಗಳು ನಮಗಿಂತ ಚೆನ್ನಾಗಿ ಕನ್ನಡ ಭಾಷೆಯನ್ನು ಬಳಸುತ್ತವೆ ಎಂಬ ತಪ್ಪು ಕಲ್ಪನೆಯಿಂದ ಹೊರಬಂದು, ನಮ್ಮ ಮನಸ್ಸಿನ ಭಾಷೆಯಾಗಿ ಕನ್ನಡವನ್ನು ಬಳಸುವುದನ್ನು ಮುಂದುವರಿಸಬೇಕು ಎಂದು ಅನಿಲ್ ಹೆಚ್.ಟಿ. ಸಲಹೆ ನೀಡಿದರು.
ದೈನಂದಿನ ಜೀವನದಲ್ಲಿ ಕನ್ನಡವನ್ನೇ ಹೆಚ್ಚು ಬಳಸುವುದು, ಕನ್ನಡ ಪತ್ರಿಕೆಗಳನ್ನು ತರಿಸಿ ಓದುವುದು ಹಾಗೂ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವ ಮೂಲಕ ಪ್ರತಿಯೊಬ್ಬ ಕನ್ನಡಿಗನೂ ಭಾಷೆಯ ರಕ್ಷಣೆಗೆ ಕೈಜೋಡಿಸಬಹುದು. ಹೊರರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರೊಂದಿಗೆ ಅವರ ಭಾಷೆಯಲ್ಲೇ ವ್ಯವಹರಿಸುವ ಬದಲು ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡ ಗೊತ್ತಿಲ್ಲದವರೂ ಕನ್ನಡ ಕಲಿತು ಹೆಮ್ಮೆಯಿಂದ ಮಾತನಾಡುವ ವಾತಾವರಣ ನಿರ್ಮಿಸಬೇಕಿದೆ ಎಂದು ಕರೆ ನೀಡಿದರು.
ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಲ್. ಮೋಹನ್ ಕುಮಾರ್ ಮಾತನಾಡಿ, ಸಮಾಜಕ್ಕೆ ಹಿರಿಯರು ನೀಡಿರುವ ಕೊಡುಗೆ ಮತ್ತು ಮಾರ್ಗದರ್ಶನ ಅಮೂಲ್ಯವಾದುದು. ಹಿರಿಯರ ಸೇವೆಯನ್ನು ಯಾರೂ ಮರೆಯದೆ ಸದಾ ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಮಲ ಮುರುಗೇಶ್ ಪ್ರಾರ್ಥಿಸಿದರು. ಪ್ರೇಮಾ ಕೋಟಿ ಧ್ವಜವಂದನೆ ನೆರವೇರಿಸಿದರು. ಸತೀಶ್ ರೈ ಅವರು ಲಯನ್ಸ್ ಸಂಸ್ಥೆಯ ನೀತಿ ಸಂಹಿತೆ ವಾಚಿಸಿದರು. ಕಾರ್ಯದರ್ಶಿ ಕೆ. ಮಧುಕರ್, ಕೆ.ಕೆ. ದಾಮೋದರ್ ಹಾಗೂ ಗೀತಾ ಮಧುಕರ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಖಜಾಂಚಿ ನವೀನ್ ಅಂಬೆಕಲ್ ವಂದಿಸಿದರು. ಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷ ಮದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ನಾಗರಿಕರಿಗೆ ಸನ್ಮಾನ:
ಲಯನ್ಸ್ ಸಂಸ್ಥೆಯ 75 ವರ್ಷಗಳ ಸೇವಾ ಪಯಣದಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ವಿ. ಮೋಹನ್ ದಾಸ್, ಪಿ.ಪಿ. ಸೋಮಣ್ಣ, ಎಸ್.ಬಿ. ಮುರುಗೇಶ್ ಹಾಗೂ ಜೆ.ವಿ. ಕೋಟಿ ಅವರನ್ನು ಅಮೃತೋತ್ಸವ ಯೋಜನೆಯಡಿ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

















