ಮಡಿಕೇರಿ NEWS DESK ನ.25 : ಭತ್ತದ ಫಸಲು ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಕೊಡಗಿನ ವಿಶಿಷ್ಟ ಸಂಸ್ಕೃತಿಯ ಸುಂದರ ಹಬ್ಬ ‘ಪುತ್ತರಿ (ಹುತ್ತರಿ)’ ಯನ್ನು ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಸಂಜೆ 6 ಗಂಟೆ 5 ನಿಮಿಷಕ್ಕೆ ನೆರೆ ಕಟ್ಟಿ, ಸಂಜೆ 7 ಗಂಟೆ 5 ನಿಮಿಷದಲ್ಲಿ ಕದಿರು ತೆಗೆದು ದೇವಾಲಯಕ್ಕೆ ತರಲಾಯಿತು. ಬಳಿಕ ವಿಶೇಷ ಪೂಜೆ ಪ್ರಾರ್ಥನೆಯೊಂದಿಗೆ ಭಕ್ತರಿಗೆ ಕದಿರು ಹಂಚಲಾಯಿತು. ರಾತ್ರಿ 8 ಗಂಟೆ 5 ನಿಮಿಷಕ್ಕೆ ಪ್ರಸಾದ ಸ್ವೀಕರಿಸಲಾಯಿತು. ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲೂ ಪುತ್ತರಿ (ಹುತ್ತರಿ) ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬಳಿಕ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಫಲ ಭರಿತ ಗದ್ದೆಗಳಲ್ಲಿ ಹುಣ್ಣಿಮೆಯ ರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಗಳೊಂದಿಗೆ ಕದಿರು ತೆಗೆದು ಸಂಭ್ರಮದಿಂದ ಮನೆಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡು ಪುತ್ತರಿಯನ್ನು ಆಚರಿಸಲಾಯಿತು. ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಹಗಲಿನಲ್ಲೆ ಕದಿರು ತೆಗೆದು ಹುತ್ತರಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇಗುಲದಲ್ಲಿ, ಮಡಿಕೇರಿ ಕೊಡವ ಸಮಾಜ, ಗೌಡ ಸಮಾಜ, ಕನ್ನಂಡಬಾಣೆಯ ದೃಷ್ಠಿ ಗಣಪತಿ ದೇಗುಲದಲ್ಲಿ ಸಾಂಪ್ರದಾಯಿಕವಾಗಿ ರಾತ್ರಿ 6.25 ಕ್ಕೆ ನೆರೆ ಕಟ್ಟಿ, ರಾತ್ರಿ 7.25ಕ್ಕೆ ಕದಿರು ತೆಗೆಯುವ ಮೂಲಕ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ನಗರ ಪ್ರದೇಶ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ದೇವಸ್ಥಾನ, ವಿವಿಧ ಸಮಾಜಗಳಿಗೆ ತೆರಳಿ ಕದಿರು ಸ್ವೀಕರಿಸಿ ಮನೆಗೆ ಕೊಂಡೊಯ್ದರು. ಜಿಲ್ಲೆಯ ಭಾಗಮಂಡಲ, ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆ, ಪೊನ್ನಂಪೇಟೆ ಸೇರಿದಂತೆ ಗ್ರಾಮ ಗ್ರಾಮಗಳಲ್ಲಿ ಹುತ್ತರಿ ಹಬ್ಬವನ್ನು ಕದಿರು ತೆಗೆದು, ಪಟಾಕಿ ಸಿಡಿಸುವ ಮೂಲಕ ಕುಟುಂಬಸ್ಥರನ್ನು ಒಳಗೊಂಡಂತೆ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. *ಹಗಲಿನಲ್ಲಿ ಹುತ್ತರಿ ಸಂಭ್ರಮ*
ಪೊನ್ನಂಪೇಟೆ ತಾಲ್ಲೂಕಿನ ಕಿರುಗೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಮಹಾದೇವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅಲೆಮಾಡ ಸುಧೀರ್ ಅವರ ನೇತೃತ್ವದಲ್ಲಿ ಅರ್ಚಕರಾದ ಸುದರ್ಶನ್ ಭಟ್ ಅವರ ಮುಂದಾಳತ್ವದಲ್ಲಿ ಗುರುವಾರ ಬೆಳಿಗ್ಗೆ 10.30 ಗಂಟೆಗೆ ಗ್ರಾಮಸ್ಥರು ಮೆರವಣಿಗೆಯ ಮೂಲಕ ದೇವರ ಗದ್ದೆಗೆ ತೆರಳಿದರು. ಬಳಿಕ ಭತ್ತದ ಗದ್ದೆಗೆ ವಿಶೇಷ ಪೂಜೆ ಸಲ್ಲಿಸಿ ಹಾಲು ಸುರಿದು ಕದಿರು ತೆಗೆಯಲಾಯಿತು. ನಂತರ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ, ದೇವರಿಗೆ ಕದಿರು ಹಾಕಿ ತೀರ್ಥ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಗ್ರಾಮಸ್ಥ ಗಾಂಡಂಗಡ ಉತ್ತಯ್ಯ ಹಾಗೂ ಆರ್ಚಕರಾದ ಸುದರ್ಶನ್ ಭಟ್ ಅವರು ಪುತ್ತರಿ ಆಚರಣೆ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು.



































