ಕುಶಾಲನಗರ ನ.24 NEWS DESK : ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯ ಪ್ರಾಂಶುಪಾಲೆ ಜೆ.ಎ. ಸಂಜನಾ ಅವರು 2026-27ನೇ ಸಾಲಿನ ಅತ್ಯುತ್ತಮ ಪ್ರಾಂಶುಪಾಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಎಕ್ಸಲೆನ್ಸ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂಜನಾ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂಡಿಯನ್ ಟ್ಯಾಲೆಂಟ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಪಿ.ಬಿ. ಕೊಟ್ಟೂರ್ ಹಾಗೂ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರು ಸಂಜನಾ ಅವರಿಗೆ ಪ್ರಶಸ್ತಿ ಫಲಕಗಳನ್ನು ಪ್ರದಾನ ಮಾಡಿದರು. ಪ್ರಾಂಶುಪಾಲೆ ಸಂಜನಾ ಅವರ ನಾಯಕತ್ವದ ಗುಣಗಳು, ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯ ಮೇಲಿನ ಬದ್ಧತೆ, ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಯತ್ನಗಳು ಹಾಗೂ ಶೈಕ್ಷಣಿಕ ಉತ್ಕೃಷ್ಟತೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಸಂಜನಾ ಅವರ ಸಾಧನೆಯನ್ನು ಜ್ಞಾನಗಂಗಾ ಸಂಸ್ಥೆಯ ಅಧ್ಯಕ್ಷರಾದ ಟಿ.ಕೆ. ಸುಧೀರ್ ಹಾಗೂ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಶ್ಲಾಘಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.


















