
ಮಡಿಕೇರಿ ಸೆ.24 NEWS DESK : ಪ್ರಸ್ತುತ ರಾಜ್ಯ ಸರಕಾರ ನಡೆಸುತ್ತಿರುವ ಮತ್ತು ಮುಂದಿನ ವರ್ಷ ಕೇಂದ್ರ ಸರಕಾರ ನಡೆಸುವ ಜಾತಿ ಜನಗಣತಿಯ ಸಂದರ್ಭ ಕೊಡಗಿನ ಆದಿದ್ರಾವಿಡ ಸಮುದಾಯದವರು ಜಾತಿಯ ಕಾಲಂನಲ್ಲಿ ಪರಿಶಿಷ್ಟ ಜಾತಿ ಮತ್ತು ಉಪಜಾತಿಯ ಕಾಲಂನಲ್ಲಿ ಆದಿದ್ರಾವಿಡ ಎಂದು ನಮೂದಿಸುವಂತೆ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ರಾಜ್ಯ ಸರಕಾರವು ಈಗಾಗಲೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಜನಗಣತಿಯ ಸಮೀಕ್ಷೆಯನ್ನು ಆರಂಭಿಸಿದೆ. ಮುಂದಿನ ವರ್ಷ ಕೇಂದ್ರ ಸರಕಾರ ಕೂಡ ಗಣತಿ ನಡೆಸಲಿದ್ದು, ಎರಡೂ ಗಣತಿಯಲ್ಲೂ ಆದಿದ್ರಾವಿಡ ಸಮಾಜ ಬಾಂಧವರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆದಿದ್ರಾವಿಡರು ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿಯ ಕಾಲಂನಲ್ಲಿ ಪರಿಶಿಷ್ಟ ಜಾತಿ, ಉಪಜಾತಿ ಕಾಲಂನಲ್ಲಿ ಆದಿದ್ರಾವಿಡ ಮತ್ತು ಉಪಜಾತಿಗೆ ಪರ್ಯಾಯ ಹೆಸರು ಕಾಲಂನಲ್ಲಿ ಮೂಲದ್ರಾವಿಡರು ಎಂದು ನಮೂದಿಸುವಂತೆ ತಿಳಿಸಿದ್ದಾರೆ. ಸರಕಾರ ನಡೆಸುತ್ತಿರುವ ಜಾತಿ ಜನಗಣತಿ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಮಹತ್ವವನ್ನು ಪಡೆದುಕೊಂಡಿದ್ದು, ಸಮಸ್ತ ಆದಿ ದ್ರಾವಿಡ ಸಮುದಾಯದವರು ಯಾವುದೇ ಗೊಂದಲಗಳಿಗೆ ಒಳಗಾಗದೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಗಣತಿದಾರರು ಬಂದಾಗ ಮೇಲೆ ತಿಳಿಸಿದ ರೀತಿಯಲ್ಲೇ ಸಮೀಕ್ಷೆಯ ಕಾಲಂನಲ್ಲಿ ಕಡ್ಡಾಯವಾಗಿ ವಿವರ ನಮೂದಿಸಿ ಸಹಕರಿಸಬೇಕು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕುರಿತು ಸಮುದಾಯ ಬಾಂಧವರಲ್ಲಿ ಅರಿವು ಮೂಡಿಸಬೇಕು ಎಂದು ಹೆಚ್.ಎಂ.ಸೋಮಪ್ಪ ಕೋರಿದ್ದಾರೆ.









