ಮಡಿಕೇರಿ ಜ.1 : ತ್ಯಾಗತ್ತೂರು ಗ್ರಾಮದ ಕೃಷ್ಣಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಭತ್ತದ ಗದ್ದೆಗಳಿಗೆ ನುಗ್ಗಿರುವ ಆನೆಗಳ ಹಿಂಡು ಕೊಯ್ಲಿಗೆ ಬಂದಿದ್ದ ಫಸಲನ್ನು ತಿಂದು ತೇಗಿದೆ.
ಗದ್ದೆಗಳು ಮಾತ್ರವಲ್ಲದೆ ತೋಟಗಳಿಗೂ ನುಗ್ಗುತ್ತಿರುವ ಕಾಡಾನೆಗಳು ಕಾಫಿ ಹಣ್ಣನ್ನು ತಿಂದು ನಷ್ಟಪಡಿಸಿವೆ.
ಕಳೆದ ಅನೇಕ ದಿನಗಳಿಂದ ಕಾಡಾನೆಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲವೆಂದು ಭತ್ತದ ಫಸಲು ಕಳೆದುಕೊಂಡ ಕೃಷಿಕ ಎ.ವಿ.ಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಗದ್ದೆಯನ್ನು ಸಂಪೂರ್ಣವಾಗಿ ಕಾಡಾನೆಗಳು ನಾಶ ಮಾಡಿವೆ, ಅಕಾಲಿಕ ಮಳೆಯ ನಡುವೆ ಸಾಲ ಮಾಡಿ ಭತ್ತವನ್ನು ಬೆಳೆಸಲಾಯಿತು. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ, ಸರ್ಕಾರ ಈ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕಾಡಾನೆ ದಾಳಿಯಿಂದ ಅಪಾರ ನಷ್ಟ ಅನುಭವಿಸಿರುವ ಸ್ಥಳೀಯ ಕೃಷಿಕರಾದ ನಂದೀಶ್ ಹಾಗೂ ಪ್ರದೀಪ್ ಅವರು ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ತಕ್ಷಣ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.
::: ಮಗ್ಗುಲದಲ್ಲಿ ದಾಳಿ :::
ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಪ್ರಗತಿಪರ ರೈತ ಪುಲಿಯಂಡ ಜಗದೀಶ್ ಅವರು ಕಟಾವು ಮಾಡಿ ಚೀಲಗಳಲ್ಲಿ ತುಂಬಿಸಿ ಕಣದಲ್ಲಿಟ್ಟಿದ್ದ ಭತ್ತವನ್ನು ಕಾಡಾನೆಗಳು ನಾಶಪಡಿಸಿವೆ.
ಆನೆ ಮತ್ತು ಮಾನವ ಸಂಘರ್ಷದ ಬಗ್ಗೆ ವಿಧಾನಸೌಧದ ವರೆಗೆ ಚರ್ಚೆಗಳು ನಡೆಯುತ್ತದೆ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












