ವಿರಾಜಪೇಟೆ ಜ.2 : ಮಲೆತಿರಿಕೆ ಬೆಟ್ಟದ ಶ್ರೀ ಅಯ್ಯಪ್ಪ ಸ್ಪಾಮಿ ದೇವಾಲಯದ ವಾರ್ಷಿಕ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ಶ್ರೀ ಅಯ್ಯಪ್ಪ ಸ್ಪಾಮಿ ಚಲನವಲನಉಳ್ಳ ಸ್ತದ್ಧಚಿತ್ರ, ಅಯ್ಯಪ್ಪ ಸ್ಪಾಮಿ ಮಾಲಾಧರಿಗಳ ಭಜನೆ, ದೀಪಾರತಿಯ ಶೋಭಯಾತ್ರೆಯೊಂದಿಗೆ ವಾರ್ಷೀಕ ಉತ್ಸವ ತೆರೆಕಂಡಿತು.
ಮುಂಜಾನೆಯಿಂದಲೇ ಶ್ರೀ ಅಯ್ಯಪ್ಪ ಸ್ವಾಮಿಗೆ ಗಣಪತಿ ಹೊಮ, ಲಕ್ಷ್ಮೀ ಪೂಜೆ ಸರಸ್ಪತಿ ಪೂಜೆ, ತುಲಭಾರ ಸೇವೆ ಲಕ್ಷಾರ್ಚನೆ ಹಾಗೂ ಮಾಹಾಪೂಜೆ ಜರುಗಿತು.
ನಂತರ ಗರುಡ ಪಕ್ಷಿಯ ಆಗಮಾನಗೊಂಡು ಗರುಡಕಂಭಕ್ಕೆ ಮೂರು ಸುತ್ತಿನ ಪ್ರದಕ್ಷಿಣೆಯೊಂದಿಗೆ ಹಿಂದಿರುಗಿತು.
ಮಾಹಾಪೂಜೆ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಬೆಟ್ಟದ ತಪ್ಪಲಿನಿಂದ ಶ್ರೀ ಅಯ್ಯಪ್ಪ ಸ್ಪಾಮಿಯ ಶೋಭಯಾತ್ರೆ ಆರಂಭಗೊಂಡಿತು. ಮೆರವಣಿಗೆಯು ತೆಲುಗರ ಬೀದಿ, ದೊಡ್ಡಟ್ಟಿ ಚೌಕಿ, ಎಫ್.ಎಂ.ಸಿ ರಸ್ತೆ, ಮಲಬಾರ್ ರಸ್ತೆಯ ಶ್ರೀ ಚೈತನ್ಯ ಮಠಪುರ, ಮುತ್ತಪ್ಪ ದೇವಾಲಯದಲ್ಲಿ ಕೊನೆಗೊಂಡಿತು.
ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು.
ಶೋಭಯಾತ್ರೆಯಲ್ಲಿ ಹೆಣ್ಣು ಮಕ್ಕಳ ದೀಪಾರತಿ ಸೇವೆ, ಶ್ರೀ ಅಯ್ಯಪ್ಪ ಸ್ಪಾಮಿಯ ಉತ್ಸವ ಮೂರ್ತಿಗೆ ಭಕ್ತರಿಂದ ಪೂಜೆಗಳು ಸಲ್ಲಿಕೆಯಾದವು, ಕೇರಳದ ಸಂಪ್ರದಾಯಿಕ ಚಂಡೆಮದ್ದಳೆ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ಪಾಮಿಯ ಕಥಾ ಸಾರವನ್ನು ಸಾರುವ ಚಲನವಲನ ಸ್ತಬ್ಧ ಚಿತ್ರ, ಪುತ್ತೂರಿನ ಕೀಲು ಕುದುರೆ ಮತ್ತು ಗೊಂಬೆ ಕುಣಿತ, ಮಾಲಾ ವೃತಧಾರಿಗಳಿಂದ ಶ್ರೀ ಅಯ್ಯಪ್ಪನ ಭಜನೆಗಳು ಮೆರವಣಿಗೆಗೆ ಸಾತ್ ನೀಡಿದವು.
ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮತ್ತು ಅಯ್ಯಪ್ಪ ಮಾಲಾಧಾರಿಗಳು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ